-->
ಸುಬ್ರಹ್ಮಣ್ಯ: ಗುಡ್ಡ ಕುಸಿತದಿಂದ ಮಣ್ಣಿನಡಿ ಸಿಲುಕಿದ ಬಾಲಕಿಯರಿಬ್ಬರು ಬದುಕಿ ಬರಲೇ ಇಲ್ಲ!

ಸುಬ್ರಹ್ಮಣ್ಯ: ಗುಡ್ಡ ಕುಸಿತದಿಂದ ಮಣ್ಣಿನಡಿ ಸಿಲುಕಿದ ಬಾಲಕಿಯರಿಬ್ಬರು ಬದುಕಿ ಬರಲೇ ಇಲ್ಲ!

ಸುಬ್ರಹ್ಮಣ್ಯ: ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸಮೀಪದ ಪರ್ವತಮುಖಿ ಎಂಬ ಪ್ರದೇಶದ ಮನೆಯ ಮೇಲೆ ಭಾರೀ ಗುಡ್ಡ ಕುಸಿದು ಬಿದ್ದ ಪರಿಣಾಮ  ಬಾಲಕಿಯರಿಬ್ಬರು ಮಣ್ಣಿನಡಿ ಸಿಲುಕಿ ಮೃತಪಟ್ಟ ದುರ್ಘಟನೆಯೊಂದು ಸೋಮವಾರ ರಾತ್ರಿ ನಡೆದಿದೆ. 

ಪರ್ವತಮುಖಿ ನಿವಾಸಿ ಕುಸುಮಾಧರ ಎಂಬವರ ಪುತ್ರಿಯರಾದ ಶ್ರುತಿ ( 11 ) ಹಾಗೂ ಜ್ಞಾನಶ್ರೀ ( 6 ) ಮೃತಪಟ್ಟ ದುರ್ದೈವಿ ಬಾಲಕಿಯರು. 

ಸೋಮವಾರ ಸಂಜೆಯಿಂದ ಸುಬ್ರಹ್ಮಣ್ಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗೆ ಸುರಿದ ಕುಂಭದ್ರೋಣ ಮಳೆಗೆ ಕುಸುಮಾಧರ ಅವರ ನಿವಾಸದ ಹಿಂಬದಿಯಿದ್ದ ಗುಡ್ಡ ಏಕಾಏಕಿ ಮನೆಯ ಮೇಲೆಯೇ ಬಿದ್ದು ಈ ದುರಂತ ಸಂಭವಿಸಿದೆ. ಸುಬ್ರಹ್ಮಣ್ಯ ಠಾಣಾ ಪೊಲೀಸರು ಹಾಗೂ ಪುತ್ತೂರು ಉಪ ವಿಭಾಗಾಧಿಕಾರಿ ಸೇರಿದಂತೆ ಸ್ಥಳೀಯಾಡಳಿತದ ಅಧಿಕಾರಿಗಳು ಸ್ಥಳಕ್ಕೆ ದೌಢಾಯಿಸಿದ್ದಾರೆ. ತಕ್ಷಣ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗಿದೆ. 

ಈ ಮನೆಯಲ್ಲಿ ಕುಸುಮಾಧರ ಮತ್ತು ಅವರ ಪತ್ನಿ, ತಾಯಿ ಹಾಗೂ ಮಕ್ಕಳಿಬ್ಬರಿದ್ದರು. ರಾತ್ರಿಯಾಗುತ್ತಿದ್ದಂತೆ ಏಕಾಏಕಿ ಭಾರೀ ಶಬ್ದ ಕೇಳಿ ಬಂದಿದೆ. ಈ ವೇಳೆ ತಂದೆ, ತಾಯಿ ಹಾಗೂ ಅಜ್ಜಿ ಈ ಮೂವರೂ ಮನೆಯಿಂದ ಹೊರಗೆ ಓಡಿ ಪಾರಾಗಿದ್ದಾರೆ. ಆದರೆ ಮಕ್ಕಳಿಬ್ಬರು ಮನೆಯೊಳಗಿದ್ದು, ಏಕಾಏಕಿ ಗೋಡೆ ಕುಸಿದಿದ್ದರಿಂದ ಅವರಿಗೆ ಹೊರ ಬರಲು ಆಗಿಲ್ಲ ಎಂದು ತಿಳಿದುಬಂದಿದೆ. ಮರುಕ್ಷಣವೇ ಮನೆಯ ಮೇಲೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಮಕ್ಕಳಿಬ್ಬರು ಅದರಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಹೊರತೆಗೆಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಮಕ್ಕಳಿಬ್ಬರ ಮೃತದೇಹ ಕಡಬದ ಶವಾಗಾರದಲ್ಲಿದೆ.

Ads on article

Advertise in articles 1

advertising articles 2

Advertise under the article