ಸೈಕಲ್ ಕಳವು ಶಂಕೆ: ಪೊಲೀಸ್ ಸೇರಿದಂತೆ ಗುಂಪಿನಿಂದ 9ರ ಬಾಲಕನನ್ನು ಥಳಿತ

ಭೋಪಾಲ್: ಸೈಕಲ್ ಕಳವುಗೈದಿರುವ ಶಂಕೆಯಲ್ಲಿ 9 ವರ್ಷದ ಬಾಲಕನೊಬ್ಬನಿಗೆ ಮಪ್ತಿಯಲ್ಲಿದ್ದ ಪೊಲೀಸ್ ಸೇರಿದಂತೆ ಬೈಕ್‌ನಲ್ಲಿ ಬಂದಿರುವ ಕೆಲವರು ಅಮಾನುಷವಾಗಿ ಥಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.  

ಬಾಲಕನನ್ನು ಹಲ್ಲೆಗೈದ ಗುಂಪಿನಲ್ಲಿ ವಿಶೇಷ ಸಶಸ್ತ್ರ ಪಡೆಯ 6ನೇ ಬೆಟಾಲಿಯನ್‌ನ ಪೇದೆ ಅಶೋಕ್ ತಾಪಾ ಕೂಡಾ ಸೇರಿರುವುದನ್ನು ಪತ್ತೆ ಮಾಡಲಾಗಿದೆ ಎಂದು ಎಸ್ಪಿ ಸಿದ್ಧಾರ್ಥ ಬಹುಗುಣ ಹೇಳಿದ್ದಾರೆ. ಈ ಪುಟ್ಟ ಬಾಲಕನನ್ನು ಬೈಕ್‌ನಲ್ಲಿ ಕುಳಿತ ವ್ಯಕ್ತಿಯೊಬ್ಬ ಹಿಡಿದುಕೊಂಡಿದ್ದಾನೆ. ಆಗ ಇತರ ಇಬ್ಬರು ಬೈಕ್‌ನಲ್ಲಿ ಆಗಮಿಸಿದ್ದಾರೆ. ಓರ್ವ ಬಾಲಕನನ್ನು ತುಳಿಯುತ್ತಿದ್ದರೆ, ಟಿ - ಶರ್ಟ್ ಧರಿಸಿರುವ ಮತ್ತೋರ್ವನು ಬಾಲಕನ ಕೂದಲು ಹಿಡಿದುಕೊಂಡು ಅಮಾನುಷವಾಗಿ ಥಳಿಸುತ್ತಿದ್ದಾನೆ. ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಲು ಯತ್ನಿಸಿದಾಗ, ಟಿ - ಶರ್ಟ್ ಧರಿಸಿದ ವ್ಯಕ್ತಿ ಆತನನ್ನು ದೂರಕ್ಕೆ ತಳ್ಳುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಿಸುತ್ತಿದೆ. ಹಲ್ಲೆ ನಡೆಸದಂತೆ ಮಹಿಳೆಯೊಬ್ಬರು ತಡೆಯುವ ಪ್ರಯತ್ನ ಮಾಡುತ್ತಿದ್ದು, ಬಾಲಕನನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಬೈಕ್ ಹಿಂದಕ್ಕೆ ತೆಗೆದು ಜೋರಾಗಿ ಹೋಗುತ್ತಿರುವುದೂ ಕಂಡುಬಂದಿದೆ.

ಈ ಬಗ್ಗೆ ರಂಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಪೊಲೀಸ್ ಪೇದೆಗೆ ನೋಟಿಸ್ ನೀಡಲಾಗಿದೆ. ಆತನ ಮೇಲೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 323, 294, 75ರ ಅನ್ವಯ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu