ಲಖನೌ: ಹೆಂಡತಿಗೆ ಗಂಡ ಹೊಡೆಯೋದು, ಬಡಿಯೋದು, ಹಿಂಸೆ ಕೊಡುವುದುನ್ನು ನಾವು ಕೇಳುತ್ತಿರುತ್ತೇವೆ. ಇಲ್ಲೊಬ್ಬ ಪತಿರಾಯ ಪತ್ನಿಯೊಂದಿಗೆ ಜಗಳವಾಡಿ, ಆಕೆಯ ಕಾಟ ತಾಳಲಾರದೆ ಮರ ಏರಿ ಕುಳಿತಿರುವ ಘಟನೆ ಉತ್ತರ ಪ್ರದೇಶದ ಮವ್ ಜಿಲ್ಲೆಯ ಕೋಪಗಂಜ್‌ನಲ್ಲಿ ನಡೆದಿದೆ.
ಇಲ್ಲಿನ ರಾಮ್ ಪ್ರವೇಶ್ ಎಂಬಾತ ಈ ರೀತಿ ಮಾಡಿದ್ದಾನೆ. ಈತ ಮರ ಏರಿ ಕೆಳಕ್ಕೆ ಇಳಿದಿದ್ದರೆ ಅದು ಸುದ್ದಿಯಾಗುತ್ತಿರಲಿಲ್ಲ. ಆದರೆ ಈತ ಕಳೆದ ಒಂದು ತಿಂಗಳಿನಿಂದ ಮರವೇರಿ ಕುಳಿತಿದ್ದಾನೆ. ದಿನವೂ ಜಗಳವಾಡುತ್ತಿದ್ದ ಪತ್ನಿಯಿಂದ ಬೇಸತ್ತ ಈತ 80 ಅಡಿ ಎತ್ತರದ ಮರವೇರಿ ಅಲ್ಲಿಯೇ ವಾಸವಾಗಿದ್ದಾನೆ.
ಈತ ಮದುವೆಯಾದಂದಿನಿಂದಲೂ ಪತಿ- ಪತ್ನಿ ಜಗಳವಾಡುತ್ತಲೇ ಇದ್ದಾರೆ. ಇತ್ತೀಚೆಗೆ ಆರು ತಿಂಗಳಿನಿಂದ ಅವಳ ಕಿರುಕುಳ ತಾಳದೆ ಈ ರೀತಿ ಮಾಡಿದ್ದೇನೆ. ಮನೆ ಬಿಟ್ಟು ಹೋಗುವುದು ಅಸಾಧ್ಯ. ಅದಕ್ಕೆ ಮರ ಏರಿ ಕುಳಿತಿದ್ದೇನೆ ಎನ್ನುತ್ತಾನೆ ರಾಮ್ ಪ್ರವೇಶ್.
ಈತನಿಗೆ ಕುಟುಂಬದವರು ಹಗ್ಗದಲ್ಲಿ ಆಹಾರ ಕಟ್ಟಿ , ಮೇಲಕ್ಕೆ ಕಳುಹಿಸುತ್ತಾರಂತೆ. ರಾತ್ರಿಯಾಗುತ್ತಿದ್ದಂತೆಯೇ ಇಳಿದು ಬಂದು ಮಲ ವಿಸರ್ಜನೆ ಮಾಡಿ ಮತ್ತೆ ಸರಸರ ಮರ ಏರುತ್ತಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮಸ್ಥರೆಲ್ಲಾ ಎಷ್ಟೇ ಕೇಳಿಕೊಂಡರೂ ಈತ ಮಾತ್ರ ಜಪ್ಪಯ್ಯ ಎಂದರೂ ಮರದಿಂದ ಕೆಳಗಿದು ಬರುತ್ತಿಲ್ಲ. ಅಷ್ಟಕ್ಕೂ ಗ್ರಾಮಸ್ಥರು ಈ ರೀತಿ ಪರಿಪರಿಯಾಗಿ ಕೇಳಿಕೊಳ್ಳಲು ಕೂಡ ಕಾರಣವಿದೆ. ಅದೇನೆಂದರೆ , ಹೇಳಿಕೇಳಿ ಇದು 80 ಅಡಿ ಎತ್ತರದ ಮರ. ಅಕ್ಕಪಕ್ಕದಲ್ಲಿ ಬಹಳಷ್ಟು ಮನೆಯಗಳಿವೆ. ಆದ್ದರಿಂದ ಈತ ಮೇಲಿನಿಂದ ನೋಡಿದರೆ ಅವರು ಏನು ಮಾಡುತ್ತಾರೆ ಎಲ್ಲವೂ ಕಾಣಿಸುತ್ತದೆ.
ಅದರಲ್ಲಿಯೂ ಮಹಿಳೆಯರಿಗಂತೂ ವಿಪರೀತ ಮುಜುಗರ ತಂದಿದೆ. ಇದೇ ಕಾರಣಕ್ಕೆ ಅವರು ಆತನ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಆತ ಯಾವುದೇ ಕಾರಣಕ್ಕೆ ಪತ್ನಿ ಕಾಟದಿಂದ ಮರದಿಂದ ಇಳಿಯೋಲ್ಲ ಎಂದಿದ್ದಾನೆ. ಸದ್ಯ ಗ್ರಾಮದ ಕೆಲ ಮಹಿಳೆಯರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದಾರೆ. ಗ್ರಾಮದ ಮುಖಂಡ ಈ ವೀಡಿಯೋ ಮಾಡಿ ಪೊಲೀಸರಿಗೆ ತಲುಪಿಸಿದ್ದಾನೆ. ಮುಂದೇನಾಗುತ್ತದೆಯೋ ಎಂದು ಕಾದು ನೋಡಬೇಕಿದೆ.