ಕಾಸರಗೋಡು: ನವಜಾತ ಶಿಶುವಿನ ಬಾಯಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?

ಕಾಸರಗೋಡು: ನವಜಾತ ಶಿಶುಗಳ ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ. ಆದರೆ ಮಂಗಳೂರಿನಲ್ಲಿ ಹುಟ್ಟಿದ ಈ ಶಿಶುವೊಂದರ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದೆ. ಮಂಜೇಶ್ವರ ಮೂಲದ ದಂಪತಿಯ  ಈ ಶಿಶು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೀಯಪದವಿನ ರಾಜೇಶ್‌ ಹಾಗೂ ಧನ್ಯಾ ದಂಪತಿಗೆ ಜು. 4ರಂದು ಕುಂಬಳೆಯ ಆಸ್ಪತ್ರೆಯಲ್ಲಿ ಹೆಣ್ಣು ಶಿಶು ಜನಿಸಿತ್ತು. ಆದರೆ ಹುಟ್ಟಿದ ಮಗುವಿನ ಬಾಯಿಯಲ್ಲಿ ಎರಡು ಹಲ್ಲು ಕಾಣಿಸಿಕೊಂಡಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ದಂತ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಡಾ| ಮುರಳಿ ಮೋಹನ ಚೂಂತಾರು ಅವರನ್ನು ಈ ದಂಪತಿ ಸಂಪರ್ಕಿಸಿ ಸಮಾಲೋಚನೆ ನಡೆಸಿದ್ದಾರೆ.

ಈ ಬಗ್ಗೆ ಡಾ.ಮುರಳೀ ಮೋಹನ್ ಚೂಂತಾರು ಪ್ರತಿಕ್ರಿಯೆ ನೀಡಿ, ನವಜಾತ ಶಿಶುವಿನ ಬಾಯಿಯಲ್ಲಿ ಹಲ್ಲು ಇರುವುದು ಅತಿವಿರಳ. ಒಂದು ವೇಳೆ ಇದ್ದರೂ ಅದು ಮೃದುವಾಗಿರುತ್ತದೆ. ಈ ಹಲ್ಲು ತಾಯಿ ಹಾಲುಣಿಸುವ ಸಂದರ್ಭ ತುಂಡಾಗಿ ಗಂಟಲಿನಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇರುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಆದರೆ ಇದೀಗ ಜನಿಸಿರುವ ಶಿಶುವಿನ ಹಲ್ಲು ಗಟ್ಟಿಯಿದ್ದು, ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇಲ್ಲ ಎಂದಿದ್ದಾರೆ.

ಹುಟ್ಟುವಾಗಲೇ ಇರುವ ಹಲ್ಲುಗಳಿಗೆ ಜನ್ಮಜಾತ ಹಲ್ಲುಗಳು ಎನ್ನುತ್ತಾರೆ. “ನೇಟಲ್‌ಟೂತ್‌’ “ಭ್ರೂಣದ ಹಲ್ಲುಗಳು’ “ಹುಟ್ಟು ಹಲ್ಲುಗಳು’ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಜನಿಸಿದ ಒಂದು ತಿಂಗಳೊಳಗೆ ಬಾಯಲ್ಲಿ ಹಲ್ಲುಗಳು ಮೂಡುವ ಸಾಧ್ಯತೆ ಇರುತ್ತದೆ. ಈ ಹಲ್ಲುಗಳಿಗೆ “ನವಜಾತ ಶಿಶು ಹಲ್ಲುಗಳು’ “ನಿಯೋನೇಟಲ್‌ ಟೂತ್‌’ ಎಂದು ಕರೆಯುತ್ತಾರೆ’ ಎಂದು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu