Sulya :-ಸುಳ್ಯದ ಮಳೆಹಾನಿ ಪ್ರದೇಶಕ್ಕೆ ಮುಖ್ಯಮಂತ್ರಿಗಳ ಭೇಟಿ..
Tuesday, July 12, 2022
ಸುಳ್ಯ
ಮಳೆಹಾನಿ ವೀಕ್ಷಣೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ, ಸುಳ್ಯ ಕಡೆಗಳಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಚಿವರುಗಳು,ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸುಳ್ಯ ತಾಲೂಕಿನಲ್ಲಿ ಉಂಟಾಗಿರುವ ಮಳೆ ಹಾನಿ ಮತ್ತು ಭೂಕಂಪನದ ಬಗ್ಗೆ ಸಚಿವ ಎಸ್.ಅಂಗಾರ ಅವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳ ಭೇಟಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ..!
ಮುಖ್ಯಮಂತ್ರಿಗಳು ಕೊಡಗಿನ ಭೇಟಿ ಮುಗಿಸಿ ಸುಳ್ಯ ತಾಲೂಕಿಗೆ ಆಗಮಿಸಿದಾಗ ಜಿಲ್ಲಾಡಳಿತದ ವತಿಯಿಂದ ಅವರಿಗೆ ಸ್ವಾಗತ ನೀಡಲಾಯಿತು. ಸುಳ್ಯದ ಸಂಪಾಜೆಯಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಸುಳ್ಯದ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹಲವಾರು ಜನರು ಮನವಿ ಸಲ್ಲಿಸಲು ನೆರೆದಿದ್ದು, ಮುಖ್ಯಮಂತ್ರಿಗಳು ತುರ್ತಾಗಿ ನಿರ್ಗಮಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಯಿತು.
ಮುಖ್ಯಮಂತ್ರಿಗಳ ಹೇಳಿಕೆ ಪಡೆಯಲು ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳು ನಿರಾಶೆ ಪಡುವಂತಾಯಿತು.
ಈ ಸಂದರ್ಭದಲ್ಲಿ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಕಂದಾಯ ಸಚಿವ ಆರ್.ಅಶೋಕ್, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್, ಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ, ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್, ತಹಶೀಲ್ದಾರ್ ಅನಿತಾ ಲಕ್ಷ್ಮಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.