ಮಧ್ಯಪ್ರದೇಶ: ನೆನೆಸಿದ ಕಾರ್ಯ ಕೈಗೂಡಿದರೆ ದೇವರಿಗೆ ಕುರಿ, ಕೋಳಿ, ಕೋಣ, ಹಂದಿ ಬಲಿ ಕೊಡುವ ಪದ್ಧತಿ ಇದೆ. ಆದರೆ ಇಲ್ಲೊಬ್ಬ ಪಾತಕಿ ಪುತ್ರ ಸಂತಾನವಾಗಿದೆ ಎಂಬ ಸಂಭ್ರಮದಲ್ಲಿ ದೇವಿಗೆ ಕುರಿಗಾಹಿಯನ್ನು ಬಲಿ ನೀಡಿದ್ದಾನೆ.
ಈ ಬೆಚ್ಚಿ ಬೀಳಿಸೋ ಘಟನೆ ನಡೆದಿರೋದು, ಮಧ್ಯಪ್ರದೇಶ ರಾಜ್ಯದ ರೇವಾ ಜಿಲ್ಲೆಯ ಬೆಧೋವಾ ಗ್ರಾಮದಲ್ಲಿ. ಇಲ್ಲಿನ ನಿವಾಸಿ ರಾಮ್ ಲಾಲ್ ಕೃತ್ಯ ಎಸಗಿರುವ ಪಾತಕಿ. ಈತ ತನ್ನಿಚ್ಛೆಯಂತೆ ಗಂಡು ಮಗು ಜನಿಸಿದೆ ಎಂದು ದೇವಿಗೆ 18 ವರ್ಷದ ಅಮಾಯಕ ಕುರಿ ಮೇಯಿಸುವವನನ್ನು ಬಲಿ ನೀಡಿದ್ದಾನೆ.
ರಾಮ್ ಲಾಲ್ ಗೆ ಮೂವರು ಪುತ್ರಿಯರಿದ್ದಾರೆ. ಆದರೆ ಪುತ್ರನೋರ್ವನು ಬೇಕೆಂದು ಗ್ರಾಮದ ದೇವಿಗೆ ನರ ಬಲಿ ನೀಡುವ ಹರಕೆ ಹೇಳಿಕೊಂಡಿದ್ದನಂತೆ. ಆತನಿಗೆ ಇದೀಗ ಪುತ್ರನ ಜನನವಾಗಿದೆ. ಪರಿಣಾಮ ಹರಕೆ ತೀರಿಸಲು ನರಬಲಿಗೆ ಮನುಷ್ಯರನ್ನು ಹುಡುಕುತ್ತಿದ್ದ. ಆಗ ಆತನ ದೃಷ್ಟಿಗೆ ಕುರಿ ಮೇಯಿಸುತ್ತಿದ್ದ 18 ವರ್ಷದ ದಿವ್ಯಾಂಶು ಎಂಬ ಅಮಾಯಕ ಬಿದ್ದಿದ್ದಾನೆ. ಆತನನ್ನು ಪುಸಲಾಯಿಸಿ ಕರೆದೊಯ್ದು ರಾಮ್ ಲಾಲ್ ದೇವಿಗೆ ಬಲಿ ನೀಡಿದ್ದಾನೆ. ಬಳಿಕ ಆತನ ಮೃತದೇಹವನ್ನು ದೇವಿಯ ವಿಗ್ರಹದ ಕೆಳಗಡೆ ಹೂತುಹಾಕಿದ್ದಾನೆ.
ಮೃತದೇಹ ಗೋಚರಿಸುತ್ತಿದ್ದಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಮೃತದೇಹ ಮೇಲೆತ್ತಿ ತನಿಖೆ ನಡೆಸಿದ ಬಳಿಕ ಪ್ರಕರಣ ಬಯಲಿಗೆ ಬಂದಿದೆ. ತಾನೇ ಕೊಲೆ ಮಾಡಿರುವುದಾಗಿ ರಾಮ್ ಲಾಲ್ ಒಪ್ಪಿಕೊಂಡಿದ್ದ. ಪುತ್ರನ ಜನನವಾಗಬೇಕಿದ್ದಲ್ಲಿ ಮತ್ತೋರ್ವ ಯುವಕನನ್ನು ದೇವಿಗೆ ಬಲಿ ನೀಡಬೇಕೆಂದು ಶಾಸ್ತ್ರದಲ್ಲಿ ಇತ್ತು ಎಂಬ ಕಾರಣಕ್ಕೆ ಈತ ಯುವಕನನ್ನು ಬಲಿ ನೀಡಿರುವುದಾಗಿ ಆತ ಒಪ್ಪಿಕೊಂಡಿದ್ದನೆ ಎನ್ನಲಾಗಿದೆ.