ವಿದ್ಯಾರ್ಥಿಗಳ ಲಿಪ್ ಲಾಕ್ ಪ್ರಕರಣ: ಮೂವರು ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರು ವಶಕ್ಕೆ

ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆಯಲಾಗಿದ್ದು, ಈ ಮೂಲಕ ವಶಕ್ಕೆ ತೆಗೆದುಕೊಂಡವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ನಗರದ ಬಾವುಟಗುಡ್ಡೆ ಸಮೀಪದ ಅಪಾರ್ಟ್‌ಮೆಂಟ್ ನಿವಾಸಿ ವಿದ್ಯಾರ್ಥಿಗಳು ಸಹಪಾಠಿ ವಿದ್ಯಾರ್ಥಿನಿಯರನ್ನು ಕೊಠಡಿಗೆ ಕರೆಸಿಕೊಂಡು ಟ್ರುತ್ ಆ್ಯಂಡ್ ಡೇರ್ ಗೇಮ್ ಆಡಿ ಅವರಿಗೆ ಲಿಪ್ ಲಾಕ್ ಮಾಡಿ ಅನುಚಿತವಾಗಿ ವರ್ತಿಸಿದ್ದರು. ಇದರ ವೀಡಿಯೋ ಮಾಡಿ ವೈರಲ್ ಮಾಡಿದ್ದರು. ಆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಪೊಲೀಸರು 3 ಪ್ರತ್ಯೇಕ ಪೊಕ್ಸೊ ಪ್ರಕರಣ ದಾಖಲಿಸಿದ್ದರು.  ತನಿಖೆ ನಡೆಸಿದ ಪೊಲೀಸರು ಈ   ಐವರನ್ನು ವಶಕ್ಕೆ ತೆಗೆದುಕೊಂಡು ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇದೀಗ ಮತ್ತೆ ಮೂವರು ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈವರೆಗೆ 8 ಮಂದಿಯನ್ನು ವಶಕ್ಕೆ ಪಡೆದಂತಾಗಿದೆ.