-->
ರಾಷ್ಟ್ರಲಾಂಛನದ ಸಿಂಹ ಉಗ್ರಾವತಾರ: ಕೇಂದ್ರ ಸರಕಾರದ ವಿರುದ್ಧ ಉರಿದು ಬಿದ್ದ ಕಾಂಗ್ರೆಸ್, ವಿರೋಧ ಪಕ್ಷಗಳು

ರಾಷ್ಟ್ರಲಾಂಛನದ ಸಿಂಹ ಉಗ್ರಾವತಾರ: ಕೇಂದ್ರ ಸರಕಾರದ ವಿರುದ್ಧ ಉರಿದು ಬಿದ್ದ ಕಾಂಗ್ರೆಸ್, ವಿರೋಧ ಪಕ್ಷಗಳು

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಭಾರತದ ರಾಷ್ಟ್ರ ಲಾಂಛನದಲ್ಲಿನ ಸಿಂಹವನ್ನು ಉಗ್ರವಾಗಿ ಚಿತ್ರಿಸಿ ವಿರೂಪಗೊಳಿಸಿದೆ ಎಂದು ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳು ಆಪಾದನೆ ಮಾಡಿವೆ. 

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರದಂದು ಹೊಸ ಸಂಸತ್‌ ಭವನದ ಮೇಲೆ ರಾಷ್ಟ್ರ ಲಾಂಛನವನ್ನು ಅನಾವರಣಗೊಳಿಸಿದ್ದರು. ಆದರೆ, ಇದೀಗ ರಾಷ್ಟ್ರಲಾಂಛನದಲ್ಲಿರುವ ಸಿಂಹಗಳನ್ನು ಆಕ್ರಮಣಕಾರಿ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳು ಕ್ಯಾತೆ ತೆಗೆದಿವೆ.

ಸುಂದರ ಹಾಗೂ ವಿಶ್ವಾಸದಿಂದಲೂ ಕೂಡಿರುವ ಮುಖದಿಂದ ಕಂಗೊಳಿಸುತ್ತಿದ್ದ ಸಾಮ್ರಾಟ್ ಅಶೋಕನ ಸಿಂಹದ ಬದಲಿಗೆ ಭಯಾನಕವೂ, ಆಕ್ರಮಣಕಾರಿಯೂ ಆಗಿರುವ ಭಂಗಿಯನ್ನು ಹೊಂದಿರುವ ಸಿಂಹಗಳ ರೀತಿಯಲ್ಲಿ ಲಾಂಛನವನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. 'ನರೇಂದ್ರ ಮೋದಿಯವರೇ ದಯವಿಟ್ಟು ಸಿಂಹದ ಮುಖವನ್ನೊಮ್ಮೆ ಸರಿಯಾಗಿ ಗಮನಿಸಿ ನೋಡಿ, ಅದು ಪ್ರಸಿದ್ಧ ಸಾರಾನಾಥದಲ್ಲಿರುವ ಸಿಂಹದ ಲಾಂಛನಗಳೇ ಅಥವಾ ಗಿರ್‌ ಸಿಂಹದ ವಿಕೃತ ಆವೃತ್ತಿಯೇ?. ಮತ್ತೊಮ್ಮೆ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸರಿಪಡಿಸಿ' ಎಂದು  ಲೋಕಸಭೆಯಲ್ಲಿ ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕರಾಗಿರುವ ಅಧೀರ್‌ ರಂಜನ್‌ ಚೌಧರಿ ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ. 

ನಮ್ಮ ರಾಷ್ಟ್ರೀಯ ಚಿಹ್ನೆ ಹಾಗೂ ಸಾಮ್ರಾಟ್ ಅಶೋಕನ ಸಿಂಹಗಳಿಗೆ ಅವಮಾನವಾಗಿದೆ. ಸಾರಾನಾಥದ ಸಿಂಹ ಆಕರ್ಷಕವಾಗಿದೆ, ಪ್ರಾಮಾಣಿಕವಾಗಿದೆ ಹಾಗೂ ಆತ್ಮವಿಶ್ವಾಸದಿಂದ ಕೂಡಿದೆ. ಆದರೆ ಮೋದಿಯವರು ಸಂಸತ್ ಮೇಲೆ ಅನಾವರಣಗೊಳಿಸಿರುವ ಸಿಂಹ ಗರ್ಜನೆ ಮಾಡುತ್ತಿರುವ, ಅನಗತ್ಯವಾಗಿ ಆಕ್ರಮಣಕಾರಿಯಾಗಿ ಅಸಮಂಜಸವಾಗಿದೆ‌. ಇದು ನಾಚಿಕೆಗೇಡಿನ ಸಂಗತಿ, ತಕ್ಷಣವೇ ಅದನ್ನು ಬದಲಿಸಿ ಎಂದು ತೃಣಮೂಲ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಜವಾಹರ್‌ ಸಿರ್ಕಾರ್‌ ಟ್ವಿಟರ್‌ನಲ್ಲಿ ರಾಷ್ಟ್ರೀಯ ಲಾಂಛನದ ಎರಡು ವಿಭಿನ್ನ ಚಿತ್ರಗಳನ್ನು ಹಂಚಿಕೊಂಡು ಜರೆದಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್‌ ರಮೇಶ್‌ ಅವರು 'ಇದು ದೇಶದ ರಾಷ್ಟ್ರ ಲಾಂಛನಕ್ಕೆ ಮಾಡಿರುವ ಅತಿದೊಡ್ಡ ಅವಮಾನ. ಸಾರನಾಥದಲ್ಲಿರುವ ಅಶೋಕನ ಸ್ತಂಭದ ಮೇಲಿರುವ ಸಿಂಹಗಳ ಸ್ವರೂಪ ಸಂಪೂರ್ಣವಾಗಿ ಬದಲಾಯಿಸುವುದು ಭಾರತದ ರಾಷ್ಟ್ರೀಯ ಚಿಹ್ನೆಗೆ ಮಾಡಿದ ಅವಮಾನ' ಎಂದು ಬರೆದುಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಸಾರಾನಾಥದ ಸಿಂಹ ಟ್ರೆಂಡ್‌: ನೆಟಿಜನ್ಸ್‌ ಕೂಡಾ ಟ್ವಿಟರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದ ವಿಧಾನಸೌಧದ ಮೇಲಿನ ರಾಷ್ಟ್ರಲಾಂಛನ ಹಾಗೂ ಹೊಸ ಸಂಸತ್‌ ಭವನದ ಮೇಲಿನ ರಾಷ್ಟ್ರಲಾಂಛನವನ್ನು ಶೇರ್‌ ಮಾಡಿಕೊಂಡು ಆಗಿರುವ ಬದಲಾವಣೆಯ ಬಗ್ಗೆ ಗಮನಸೆಳೆಯಿತ್ತಿದ್ದಾರೆ. ಕಳೆದ 70 ವರ್ಷಗಳಲ್ಲಿ ರಾಷ್ಟ್ರಲಾಂಛನದ ಸಿಂಹಗಳು ಈ ರೀತಿ ಇದ್ದರೆ, ಕಳೆದ 8 ವರ್ಷಗಳಲ್ಲಿ ಸಿಂಹ ಈ ರೀತಿ ಬದಲಾಗಿದೆ ಎಂದು ಬರೆದುಕೊಂಡಿದ್ದಾರೆ. ಕರ್ನಾಟಕದ ವಿಧಾನಸೌಧದ ಮೇಲಿದ್ದ ಸಿಂಹಗಳು ಬಾಯಿಮುಚ್ಚಿಕೊಂಡಿದ್ದರೆ, ಹೊಸ ಸಂಸತ್‌ ಭವನದ ಲಾಂಛನದ ಸಿಂಹಗಳು ಘರ್ಜನೆ ಮಾಡುತ್ತಿವೆ‌. ಆದರೆ, ಹೊಸ ಸಂಸತ್‌ ಭವನದ ಲಾಂಛನ ಮೂಲ ಸಾರಾನಾಥದ ಸ್ತಂಭದಲ್ಲಿರುವ ಲಾಂಛನವನ್ನು ಹೋಲುತ್ತಿದೆ.

ಕಲಾವಿದನಿಂದ ಸ್ಪಷ್ಟನೆ: ನೂತನ ಸಂಸತ್‌ ಭವನದ ಮೇಲಿರುವ ರಾಷ್ಟ್ರಲಾಂಛನವನ್ನು ನಿರ್ಮಿಸಿರುವ ಮಾಡಿದ ಕಲಾವಿದ ಸುನೀಲ್‌ ದಿಯೋರ್‌ ಈ ಬಗ್ಗೆ ಸ್ಪಷ್ಟನೆ ನೀಡಿ 'ನಾನು ಸಾರಾನಾಥದ ಸ್ತಂಭದ ರೀತಿಯಲ್ಲಿಯೇ ಇದನ್ನು ಚಿತ್ರಿಸಿದ್ದೇನೆ. 9 ತಿಂಗಳ ಕಾಲ ಶ್ರಮವಹಿಸಿ ಇದರ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ಸಾರಾನಾಥದಲ್ಲಿರುವ ಸ್ತಂಭದ ಸಿಂಹಗಳನ್ನೇ ಇಲ್ಲಿ ಚಿತ್ರಿಸಲಾಗಿದೆ' ಎಂದಿದ್ದಾರೆ.

ಬಿಜೆಪಿ ಟೀಕೆ: ಈ ಬಗ್ಗೆ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ಮುಖಂಡರು ಟ್ವೀಟ್ ಸಮರ ಸಾರಿದೆ. ಸಚಿವೆ ಸ್ಮೃತಿ ಇರಾನಿ ವಿವಾದದ ಬಗ್ಗೆ ಮಾತನಾಡಿದ್ದು, "
'ಸಂವಿಧಾನವನ್ನು ಬದಲಾಯಿಸಿರುವ, ಸಂವಿಧಾನವನ್ನು ಮುರಿದ ವ್ಯಕ್ತಿಗಳು ಅಶೋಕ ಸ್ತಂಭದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಳಿದೇವಿಗೆ ಗೌರವ ನೀಡಲು ಗೊತ್ತಿಲ್ಲದವರು, ಅಶೋಕ ಸ್ತಂಭಕ್ಕೆ, ರಾಷ್ಟ್ರಲಾಂಛನಕ್ಕೆ ಗೌರವ ನೀಡುತ್ತಾರೆಯೇ. ಕಲಾವಿದನ ಕಡೆಯಿಂದಾಗಲಿ ಸರ್ಕಾರದ ಕಡೆಯಿಂದಾಗಲಿ ಯಾವುದೇ ತಪ್ಪುಗಳಾಗಿಲ್ಲ' ಎಂದು ಹೇಳಿದ್ದಾರೆ. 

ಇನ್ನೊಂದೆಡೆ ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಕೂಡ ಸ್ಪಷ್ಟನೆ ನೀಡಿ 'ಮೂಲ ಸಾರಾನಾಥದ ಲಾಂಛನವು 1.6 ಮೀಟರ್‌ ಎತ್ತರವಾಗಿದೆ. ಆದರೆ, ಸಂಸತ್ತಿನ ಕಟ್ಟಡದ ಮೇಲಿನ ಲಾಂಛನವು 6.5 ಮೀಟರ್‌ ಎತ್ತರದಲ್ಲಿ ದೊಡ್ಡದಾಗಿದೆ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಅವಿತಿರುತ್ತದೆ. ಶಾಂತ ಹಾಗೂ ಕೋಪದ ವಿಚಾರ ಕೂಡ ಇದೇ ರೀತಿಯದ್ದಾಗಿದೆ' ಎಂದು ಸಾರಾನಾಥದ ಮೂಲ ಸ್ತಂಭದ ಚಿತ್ರದೊಂದಿಗೆ ಪೋಸ್ಟ್‌ ಮಾಡಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article