ಮಾಟ ಮಾಡಲು ಯುವತಿಯನ್ನು ಬಲಿ ನೀಡಿದಾತನೇ ಸುಟ್ಟು ಕರಕಲಾದ: ಕಾರಣವೇನು ಗೊತ್ತೇ?
Monday, July 11, 2022
ಗುವಾಹಟಿ: ಮಾಟ ಮಾಡುವ ಉದ್ದೇಶದಿಂದ 22ರ ಯುವತಿಯನ್ನು ಬಲಿ ನೀಡಿದಾತನೇ ಇದೀಗ ಜೀವಂತವಾಗಿ ಸುಟ್ಟು ಕರಕಲಾಗಿರುವ ಭಯಾನಕ ಘಟನೆಯೊಂದು ಅಸ್ಸಾಂ ರಾಜ್ಯದ ಗುವಾಹಟಿಯ ನಾಗವ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಅಷ್ಟಕ್ಕೂ ಈತ ಸುಟ್ಟು ಕರಕಲಾಗಿರೋದೇನಕ್ಕೆ ಗೊತ್ತೇ?.. ಇಲ್ಲಿದೆ ನೋಡಿ ಘಟನೆಯ ಪೂರ್ಣ ವಿವರ.
22ರ ಯುವತಿಯನ್ನು ರಂಜಿತ್ ಬೋರ್ಡೊಲೊಯ್(35) ಎಂಬಾತ ಮಾಟ ಮಾಡುವ ಉದ್ದೇಶದಿಂದ ಬಲಿ ಕೊಟ್ಟಿದ್ದ. ಈಕೆಯ ದೇಹ ಕೆಲವು ದಿನಗಳ ಹಿಂದೆ ಕೊಳವೊಂದರಲ್ಲಿ ಪತ್ತೆಯಾಗಿತ್ತು. ಈ ಯುವತಿಯನ್ನು ರಂಜಿತ್ ಸೇರಿದಂತೆ ಐವರು ಬಲಿ ನೀಡಿರೋದನ್ನು ತಾನು ನೋಡಿರುವುದಾಗಿ ಮಹಿಳೆಯೊಬ್ಬರು ಸಾಕ್ಷಿ ನುಡಿದಿದ್ದರು. ಈ ಕುರಿತು ಗ್ರಾಮದ ಸಭೆಯಲ್ಲಿಆರೋಪಿ ರಂಜಿತ್ ಬೊರ್ಡೊಲೊಯ್ ತಪ್ಪೊಪ್ಪಿಕೊಂಡಿದ್ದ. ಆದ್ದರಿಂದ ಆರೋಪಿಯನ್ನು ಅದೇ ರೀತಿ ಹಿಂಸೆ ನೀಡಿ ಕೊಲೆ ಮಾಡಬೇಕೆಂದು ನಿರ್ಣಯಿಸಲಾಗಿತ್ತು.
ಆ ಬಳಿಕ ಕೆಲವರು ರಂಜಿತ್ ಮನೆಗೆ ನುಗ್ಗಿ ಆತನನ್ನು ಹೊರಗೆಳೆದು ತಂದು ಮರವೊಂದಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ಆತನಿಗೆ ಬೆಂಕಿ ಹಚ್ಚಿ ಕೊಂದಿದ್ದಾರೆ. ಸುಟ್ಟು ಕರಕಲಾದ ಆತನ ಮೃತದೇಹವನ್ನು ಹೂತು ಹಾಕಿದ್ದರು.
ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಹೂತು ಹಾಕಿರುವ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ ಗ್ರಾಮಸ್ಥರು ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದಾರೆ.