ಮಹಿಳೆಯ ದೇಹದಲ್ಲಿ ಗಡ್ಡೆ ಬೆಳೆಯುತ್ತಿರುವ ಸುಳಿವು ನೀಡಿದ ಆ್ಯಪಲ್‌ ವಾಚ್‌!

ನವದೆಹಲಿ: ಆ್ಯಪಲ್‌ ಕಂಪೆನಿಯ ವಾಚ್‌ ನೀಡಿರುವ ಸುಳಿವಿನಿಂದ ಮಹಿಳೆಯೋರ್ವರ ದೇಹದಲ್ಲಿ ಗಡ್ಡೆ ಬೆಳೆಯುತ್ತಿರುವುದು ತಿಳಿದು ಬಂದಿದೆ.

ಮೈನ್‌ ಎಂಬ ರಾಜ್ಯದ ಮಹಿಳೆ ಕಿಮ್‌ ಡರ್ಕಿಗೆ ಹಲವು ತಿಂಗಳ ಹಿಂದೆ ಆ್ಯಪಲ್‌ ವಾಚ್‌ನಲ್ಲಿ ಸಂದೇಶವೊಂದು ಕಂಡಿದೆ. ಈ ಸಂದೇಶದಲ್ಲಿ 'ನಿಮ್ಮ ಹೃದಯ ಅನಿಯಮಿತವಾಗಿ, ವೇಗವಾಗಿ (ಏಟ್ರಿಯಲ್‌ ಫಿಬ್ರಿಲೇಶನ್‌) ಬಡಿದುಕೊಳ್ಳುತ್ತಿದೆ' ಎಂಬ ಸಂದೇಶ ಅದರಲ್ಲಿತ್ತು. 3ನೇ ಬಾರಿ ಸ್ವಲ್ಪ ಬಲವಾದ ಸಂದೇಶ ಬಂದ ವೇಳೆ ಎಚ್ಚೆತ್ತ ಕಿಮ್‌ ಡರ್ಕಿ, ವೈದ್ಯರಲ್ಲಿಗೆ ತೋರಿಸಿದರು. 

ಮೆಸಾಚುಸೆಟ್ಸ್‌ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ, ಆಕೆಯ ದೇಹದಲ್ಲಿ ಗಡ್ಡೆ ಬೆಳೆಯುತ್ತಿರುವುದು ಪತ್ತೆಯಾಗಿದೆ. ಮುಂದೆ ಐದು ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಅದನ್ನು ನಿವಾರಿಸಲಾಯಿತು. ಒಂದು ವೇಳೆ ಸಕಾಲದಲ್ಲಿ ತೆಗೆಯದಿದ್ದರೆ, ಅದು ಕಿಮ್‌ಗೆ ಮಾರಣಾಂತಿಕವಾಗುವುದು ಖಚಿತವಿತ್ತು.

ಕಿಮ್‌ ಡರ್ಕಿಯವರಿಗೆ ಆ್ಯಪಲ್ ವಾಚ್ ನಿಂದ ಹೀಗಾಯಿತು ಎಂದ ಮಾತ್ರಕ್ಕೆ ಎಲ್ಲಾ ಸ್ಮಾರ್ಟ್‌ ವಾಚ್‌ಗಳು ಸಂಭಾವ್ಯ ಅಪಾಯವನ್ನು ಸೂಚಿಸುತ್ತವೆ ಎಂಬರ್ಥವಲ್ಲ. ವೇಗದ ಹೃದಯ ಬಡಿತ ಇತ್ಯಾದಿ ಶಾರೀರಿಕ ವ್ಯತ್ಯಾಸಗಳನ್ನು ಅವು ತೋರಿಸಬಹುದು. ಕೆಲವೊಮ್ಮೆ ತೋರಿಸದೆಯೂ ಇರಬಹುದು. ಹಾಗಾಗಿ, ಅವುಗಳ ಮೇಲೆಯೇ ಹೆಚ್ಚು ಅವಲಂಬಿತವಾಗಬಾರದು ಎಂದು ತಜ್ಞರ ಅಭಿಪ್ರಾಯ.