
ಉಡುಪಿ: ಶೂ ಖರೀದಿ ಹಣ ಹಿಂದಿರುಗಿಸುವ ನೆಪದಲ್ಲಿ 39,061 ರೂ. ಪಂಗನಾಮ!
7/15/2022 08:34:00 PM
ಉಡುಪಿ: ಶೂ ಖರೀದಿಯ ಹಣ ಹಿಂದಿರುಗಿಸುವ ನೆಪದಲ್ಲಿ ವ್ಯಕ್ತಿಯೋರ್ವರ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದು ಬ್ಯಾಂಕ್ ಖಾತೆಯಿಂದ 39,061 ರೂ.ಗಳನ್ನು ಆನ್‌ಲೈನ್ ಮೂಲಕ ಲಪಟಾಯಿಸಿರುವ ಘಟನೆಯೊಂದು ಉಡುಪಿಯಲ್ಲಿ ವರದಿಯಾಗಿದೆ.
ವಸಂತ ಶೆಟ್ಟಿ ಎಂಬವರು ಕೆನರಾ ಬ್ಯಾಂಕ್ ನ ಬ್ರಹ್ಮಾವರ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದಾರೆ. ಜು.13 ರಂದು ಹೊಸದಾಗಿ ಖರೀದಿಸಿರುವ ಶೂವೊಂದನ್ನು ಹಿಂದಿರುಗಿಸುವ ಬಗ್ಗೆ ಅವರು ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ. ಆಗ ಅತ್ತ ಕಡೆಯಿಂದ ಮಾತನಾಡಿದಾತ ಶೂ ಹಣ ಹಿಂದಿರುಗಿಸಲು ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಒದಗಿಸುವಂತೆ ಸೂಚಿಸಿದ್ದಾನೆ.
ಅದರಂತೆ ವಸಂತ ಶೆಟ್ಟಿ, ತಮ್ಮ ಕ್ರೆಡಿಟ್ ಕಾರ್ಡಿನ ವಿವರ ಒದಗಿಸಿದ್ದಾರೆ. ಬಳಿಕ ಅವರ ಕ್ರೆಡಿಟ್ ಕಾರ್ಡ್‌ನಿಂದ ಅದೇ ದಿನ ಕ್ರಮವಾಗಿ 20,290 ರೂ., 15,217 ರೂ . ಹಾಗೂ 3,554 ರೂ . ಸೇರಿದಂತೆ ಒಟ್ಟು 39,061 ರೂ. ಹಣವನ್ನು ಅನಧಿಕೃತ ವಾಗಿ ಆನ್‌ಲೈನ್ ಮೂಲಕ ಬೇರೆ ಖಾತೆಗೆ ವರ್ಗಾಯಿಸಲಾಗಿದೆ. ಆ ಬಳಿಕ ಮೋಸ ಹೋಗಿರುವ ವಸಂತ ಶೆಟ್ಟಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.