ಬರೀ 2 ರೂ. ನಾಣ್ಯಗಳನ್ನೇ ನೀಡಿ ಬೈಕ್ ಖರೀದಿಸಿದ ಭೂಪ: ಈತ ನೀಡಿದ ನಾಣ್ಯಗಳನ್ನು ಎಣಿಸಿ ಶೋರೂಂ ಸಿಬ್ಬಂದಿ ಸುಸ್ತು!
Saturday, July 16, 2022
ಕೋಲ್ಕತ್ತಾ: ತಮಿಳುನಾಡಿನ ವೈದ್ಯರೊಬ್ಬರು 10 ರೂ. ನಾಣ್ಯಗಳನ್ನೇ ನೀಡಿ ಆರು ಲಕ್ಷ ರೂ. ಕಾರು ಖರೀದಿಸಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದರು. ಇದೀಗ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ವ್ಯಾಪಾರಿಯೊಬ್ಬರು ಬರೀ 2 ರೂ. ನಾಣ್ಯಗಳನ್ನೇ ಒಟ್ಟು ಮಾಡಿ ತಮ್ಮ ಖರೀದಿಸುವ ಹಲವು ವರ್ಷಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಹೌದು ಸುಬ್ರತಾ ಸರ್ಕಾರ್ ಎಂಬವರು ಸತತ ಆರು ವರ್ಷಗಳಿಂದ 2 ರೂ. ನಾಣ್ಯಗಳನ್ನು ಸಂಗ್ರಹಿಸಿಕೊಂಡು ಬಂದು ಇದೀಗ 1.8 ಲಕ್ಷ ರೂ. ಬೈಕ್ ಖರೀದಿಸಿದ್ದಾರೆ. ನೋಟು ಅಮಾನ್ಯವಾದ ಬಳಿಕದಿಂದ ಅವರು ಚಿಲ್ಲರೆ ಸಂಗ್ರಹಕ್ಕೆ ತೊಡಗಿದ್ದಾರಂತೆ.
ಚಿಲ್ಲರೆ ವ್ಯಾಪಾರಿಯಾಗಿರುವ ಸುಬ್ರತ ಸರ್ಕಾರ್‌ಗೆ ನೋಟು ನಿಷೇಧದ ಬಳಿಕ ಬರೀ ನಾಣ್ಯಗಳ ಚಲಾವಣೆಯೇ ಹೆಚ್ಚಾಗಿತ್ತಂತೆ. ಇದಕ್ಕಾಗಿಯೇ ಅವರು ನಾಣ್ಯಗಳನ್ನೇ ಸಂಗ್ರಹಿಸಿ ಬೈಕ್ ಖರೀದಿಸಬೇಕೆಂದು ಅಂದೇ ಪಣ ತೊಟ್ಟಿದ್ದಾರೆ. ಅಂತೆಯೇ ಇದೋಗ ಅವರು ಬರೀ 2 ರೂ. ಮುಖಬೆಲೆಯ ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ. ಬೈಕ್ ಖರೀದಿಸಿದ್ದಾರೆ.
ಚೀಲಗಳಲ್ಲಿ ನಾಣ್ಯಗಳನ್ನು ತುಂಬಿಕೊಂಡು ಬೈಕ್ ಶೋ ರೂಂಗೆ ಬಂದಿದ್ದ ಸುಬ್ರತ್ ಸರ್ಕಾರ್ ರನ್ನು ನೋಡಿ ಶೋರೂಂ ಸಿಬ್ಬಂದಿ ಗಾಬರಿಯಾಗಿದ್ದಾರೆ. ಬಳಿಕ ಬೈಕ್ ಖರೀದಿಗೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ. ಅವರು ನೀಡಿದ್ದ ನಾಣ್ಯಗಳನ್ನು ಎಣಿಸುವಷ್ಟರಲ್ಲಿ ಸಿಬ್ಬಂದಿಗೆ ಸಾಕಾಗಿ ಹೋಗಿದೆಯಂತೆ. ಕೊನೆಗೂ ಈ ವ್ಯಾಪಾರಿಯ ಕನಸು ನೆರವೇರಿದೆ.