ಬೆಂಗಳೂರು: ಅಮೇರಿಕಾ ಪ್ರಜೆಗಳಿಗೆ ಕೋಟಿ ಕೋಟಿ ರೂ. ವಂಚನೆಗೈದ 11 ಮಂದಿ ಅರೆಸ್ಟ್
Friday, July 8, 2022
ಬೆಂಗಳೂರು: ಬ್ಯಾಂಕ್ ಹೆಸರಲ್ಲಿ ಅಮೇರಿಕಾ ಪ್ರಜೆಗಳಿಗೆ ವಂಚನೆಗೈಯುತ್ತಿದ್ದ ಬೃಹತ್ ಜಾಲವನ್ನು ವೈಟ್ ಫೀಲ್ಡ್ ಉಪ ವಿಭಾಗದ ಪೊಲೀಸರು ಭೇದಿಸಿ 11 ಮಂದಿ ಖತರ್ನಾಕ್ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇವರು ಸಾಫ್ಟವೇರ್ ಕಂಪೆನಿಗಳ ಸೋಗಿನಲ್ಲಿ ಅಮೇರಿಕಾದ ಪ್ರಜೆಗಳನ್ನು ಟ್ರ್ಯಾಪ್ ಮಾಡಿ ಆನ್ ಲೈನ್ ಫ್ರಾಡ್ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಬೆಂಗಳೂರು ವಾಸಿಗಳಾದ ರಿಷಿ ವ್ಯಾಸ್, ಪ್ರತೀಕ್, ಪರೀಶ್, ಹೇತ್ ಪಟೇಲ್, ಕಿರಣ್, ಸಯ್ಯದ್ ಸೇರಿದಂತೆ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಇವರ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 100 ಕ್ಕೂ ಅಧಿಕ ಮಂದಿಯನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಕಳೆದ 2 ವರ್ಷಗಳಿಂದ ಈ ರೀತಿಯಲ್ಲಿ ವಂಚನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳು ವೈಟ್ ಫೀಲ್ಡ್ ನ ಟೆಕ್ ಪಾರ್ಕ್ ನಲ್ಲಿ ಎಥಿಕಲ್ ಇನ್ ಫೋ ಫ್ರೈ.ಲಿ. ಎಂಬ ಹೆಸರಿನಲ್ಲಿ ಕಂಪೆನಿಯನ್ನು ತೆರೆದಿದ್ದರು. ಟೆಲಿಕಾಲ್ಸ್ ಗಳ ಮೂಲಕ ಅಮೇರಿಕನ್ ಪ್ರಜೆಗಳನ್ನು ಸಂಪರ್ಕಿಸುತ್ತಿದ್ದರು. ತಮ್ಮ ಖಾತೆಯಿಂದ ನಗದು ವರ್ಗಾವಣೆ ಆಗಿದೆಯೇ ಎಂದು ಅವರನ್ನು ಮಾತಿಗೆಳೆಯುತ್ತಿದ್ದ ಆರೋಪಿಗಳು, ಆ ನಗದು ವಾಪಸ್ ಆಗಬೇಕಾದಲ್ಲಿ ಒಂದಷ್ಟು ಪ್ರೊಸಿಜರ್ ಗಳನ್ನು ಫಾಲೋ ಮಾಡಿ ಎನ್ನುತ್ತಾರೆ. ಬಳಿಕ ಹಂತ ಹಂತವಾಗಿ ಬ್ಯಾಂಕ್ ಹೆಸರನ್ನು ಬಳಸಿ ಗ್ರಾಹಕರಿಂದ ಅಮೆಜಾನ್ ನಲ್ಲಿ ಲಕ್ಷ ಲಕ್ಷ ರೂ. ಗಿಫ್ಟ್ ಕಾರ್ಡ್ ಖರೀದಿಸಿ ಹಣ ಸಂಪಾದಿಸುತ್ತಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾ ರಾಯಭಾರಿ ಕಚೇರಿಯ ಬಳಿಯಿಂದ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳು ಅಮೇರಿಕಾ ಪ್ರಜೆಗಳನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದರು, ಇವರಿಗೆ ಮೊಬೈಲ್ ಸಂಖ್ಯೆಗಳನ್ನು ನೀಡುತ್ತಿರುವವರು ಯಾರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಕಂಪೆನಿಯು ಕೋಟಿ ಕೋಟಿ ರೂ. ವಂಚನೆ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.