ಮುಲ್ಕಿ: ಪತ್ನಿ, ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ; ಮಕ್ಕಳು ಬಲಿ, ಪತಿ-ಪತ್ನಿ ಪಾರು‌

ಮುಲ್ಕಿ: ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಹಾಗೂ ಪತ್ನಿಯನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ದುರ್ಘಟನೆಯೊಂದು ಗುರುವಾರ ಸಂಜೆ ಇಲ್ಲಿನ ತಾಳಿಪಾಡಿ ಗ್ರಾಮದ ಪುನರೂರು ಎಂಬಲ್ಲಿ ನಡೆದಿದೆ‌. ಈ ದುರಂತದಲ್ಲಿ ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ. ಪತ್ನಿ ಹಾಗ ಕೃತ್ಯ ಎಸಗಿರುವಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ತಾಳಿಪಾಡಿ ಗ್ರಾಮದ ಪುನರೂರು ನಿವಾಸಿ ಹಿತೇಶ್ ಶೆಟ್ಟಿಗಾರ್ ಶಾಲೆಯಿಂದ ಬಂದಿದ್ದ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿದ್ದಾನೆ. ಆದರೆ ಅಲ್ಲಿಗೆ ಬಂದ ಪತ್ನಿ ಲಕ್ಷ್ಮೀ ಮಕ್ಕಳನ್ನು ವಿಚಾರಿಸಿದ್ದಾರೆ. ಆಗ ಅವರು ಎಲ್ಲೋ ಅಡಗಿ ಕುಳಿತಿದ್ದಾರೆ ಎಂದು ಸಬೂಬು ನೀಡಿದ್ದಾನೆ. ಆದರೆ ಆಕೆ ಅನುಮಾನಗೊಂಡು ಹುಡುಕಾಡಿದ್ದಾರೆ. 

ರಶ್ಮಿತಾ(13), ಉದಯ (11) ಹಾಗೂ ದಕ್ಷಿತ್(04) ಮೃತಪಟ್ಟ ಮಕ್ಕಳು.


ಹೀಗೆ ಹುಡುಕಾಟ ನಡೆಸಿದ ಆಕೆ ಪಕ್ಕದ ಮನೆಯ ಬಾವಿಯಲ್ಲಿ ನೋಡಿದಾಗ ಮಕ್ಕಳನ್ನು ತಳ್ಳಿರುವುದು ಆಕೆಯ ಗಮನಕ್ಕೆ ಬಂದಿದೆ. ತಕ್ಷಣ ಅಲ್ಲಿಗೆ ಬಂದಿರುವ ಹಿತೇಶ್ ಶೆಟ್ಟಿಗಾರ್ ಪತ್ನಿ ಲಕ್ಷ್ಮಿಯನ್ನು 'ನೀನು ಸಾಯಿ' ಎಂದು ಬಾವಿಗೆ ತಳ್ಳಿದ್ದಾನೆ. ಬಳಿಕ ತಾನೂ ಬಾವಿಗೆ ಹಾರಿ ಆತ್ಮಕ್ಕೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಹಿತೇಶ್ ಶೆಟ್ಟಿಗಾರ್ ಹಾಗೂ ಲಕ್ಷ್ಮಿಯನ್ನು ರಕ್ಷಿಸಿ ಮೇಲಕ್ಕೆತ್ತಿದ್ದಾರೆ‌. 

ಆ ಬಳಿಕ ಮಕ್ಕಳನ್ನೂ ಬಾವಿಯಿಂದ ಮೇಲಕ್ಕೆತ್ತಿ, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂವರೂ ಮಕ್ಕಳು ಮೃತ ಪಟ್ಟಿದ್ದಾರೆ. 

ಹಿತೇಶ್ ಶೆಟ್ಟಿಗಾರ್ ಕೂಲಿ ಕೆಲಸ ಮಾಡಿಕೊಂಡಿದ್ದು, ಪತ್ನಿ ಲಕ್ಷ್ಮಿ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದರು. ಆತ ಇತ್ತೀಚಿಗೆ ಅಂಗಡಿಯೊಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ‌. 
BREAKING NEWS
Loading latest news...
Join our WhatsApp Channel Powered By : Online Pudu