ಕೂಲಿ ಕೆಲಸಕ್ಕೆಂದು ಬಂದಾತ ಕೆಲವೇ ವರ್ಷಗಳಲ್ಲಿ ಕೋಟ್ಯಾಧೀಶ್ವರ: ಜಾಡು ಹಿಡಿದು ಹೊರಟ ಪೊಲೀಸರಿಂದ ಈತನ ಕತ್ರಿಮ ಕೃತ್ಯ ಬಯಲು!

ಚಿಕ್ಕಬಳ್ಳಾಪುರ: ಕೂಲಿ ಕೆಲಸಕ್ಕೆಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂದಿದ್ದ ಆಂಧ್ರಪ್ರದೇಶದ ವ್ಯಕ್ತಿಯೋರ್ವನು ಕೆಲವೇ ವರ್ಷಗಳಲ್ಲಿ ಕೋಟ್ಯಧೀಶನಾಗಿದ್ದಾನೆ. ಇದೀಗ ಈತನ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ. ಈತನ ಸಂಪಾದನೆಯ ಜಾಡು ಹಿಡಿದು ಬೆನ್ನಟ್ಟಿದ ಪೊಲೀಸರಿಗೆ ಸ್ಪೋಟಕ ಮಾಹಿತಿ ದೊರಕಿ ಈ ಕೋಟ್ಯಧೀಶನನ್ನು ಬಂಧಿಸಿದ್ದಾರೆ. 

ಆಂಧ್ರಪ್ರದೇಶದ ಲೇಪಾ ಮೂಲದ ಕೋಟೇಶ್ವರ ರಾವ್​ ಎಂಬಾತ ಬಂಧಿತ ಆರೋಪಿ. ಈತ ಕಲ್ಲು ಗಣಿಯಲ್ಲಿ ಕೂಲಿ ಕಾರ್ಮಿಕನಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂದಿದ್ದ‌. ಇದೀಗ ಈತನಲ್ಲಿ ಬಾಗೇಪಲ್ಲಿ ಪಟ್ಟಣದ 5ನೇ ವಾರ್ಡ್​ನಲ್ಲಿ 2 ಬೃಹತ್​ ಕಟ್ಟಡ, ಕಾರಕೂರು ಕ್ರಾಸ್​ ಬಳಿ ಎಕರೆಗಟ್ಟಲೆ ಜಮೀನು ಇದೆ. ಅಲ್ಲದೆ ಬೃಹತ್​ ಕಲ್ಯಾಣ ಮಂಟಪವೊಂದನ್ನು ನಿರ್ಮಿಸುತ್ತಿದ್ದಾನೆ. ಕೂಲಿ ಕಾರ್ಮಿಕನಿಗೆ ಇಷ್ಟೊಂದು ಮೌಲ್ಯದ ಆಸ್ತಿ ಎಲ್ಲಿಂದ ಬಂತು? ಎಂದು ಬೆನ್ನಟ್ಟಿದ್ದ ಪೊಲೀಸರಿಗೆ ಈತನ ಕತ್ರಿಮ ಕೃತ್ಯ ತಿಳಿದು ಬಂದಿದೆ.

ಆರೋಪಿಯು ಹಲವು ವರ್ಷಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂ. ಸಂಪಾದಿಸಿರುವುದು ತಿಳಿದುಬಂದಿದೆ. ಈತ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಕಲಿ ಗಣಿಗಾರಿಕೆ ಪರವಾನಗಿ ಮತ್ತು ಅನುಮತಿ ತಯಾರಿಸಿ ಕೊಡುತ್ತಿದ್ದ. ಇದೀಗ ಈ ಚಾಲಾಕಿ ವಂಚಕ ಖಾಕಿ ಬಲೆಗೆ ಬಿದ್ದಿದ್ದಾನೆ. ಈತನ ಅವ್ಯವಹಾರದ ತನಿಖೆ ನಡೆಸಿರುವ ಪೊಲೀಸರು, ನಕಲಿ ಪರವಾನಗಿ ಮತ್ತು ಸರ್ಕಾರಿ ಆದೇಶ ಪತ್ರಗಳು, ದಾಖಲೆ ಸೃಷ್ಟಿಗೆ ಬಳಸುತ್ತಿದ್ದ ಕಂಪ್ಯೂಟರ್​, ಪ್ರಿಂಟರ್​ ಹಾಗೂ ಹಾಲೋಗ್ರಾಂ ತಯಾರಿಕಾ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.