-->

ಮಂಗಳೂರಿನ ರಾಮಕೃಷ್ಣ ಮಠವು ಹೆಚ್ಚು ಸದ್ದು ಮಾಡದೇ ಕೆಲಸ ಮಾಡುತ್ತಿದೆ: ಸ್ವಾಮಿ ಗೌತಮಾನಂದಜಿ ಮಹರಾಜ್

ಮಂಗಳೂರಿನ ರಾಮಕೃಷ್ಣ ಮಠವು ಹೆಚ್ಚು ಸದ್ದು ಮಾಡದೇ ಕೆಲಸ ಮಾಡುತ್ತಿದೆ: ಸ್ವಾಮಿ ಗೌತಮಾನಂದಜಿ ಮಹರಾಜ್

ಮಂಗಳೂರು: ಮಂಗಳೂರಿನ ರಾಮಕೃಷ್ಣ ಮಠವು ಹೆಚ್ಚು ಸದ್ದು ಮಾಡದೇ ಕೆಲಸ ಮಾಡುತ್ತಿದೆ. ಅನೇಕರಿಗೆ ಈ ಮಠ ಎಷ್ಟು ಕೆಲಸ ಮಾಡಿದೆ ಎಂದು ತಿಳಿದಿಲ್ಲ. ರಾಮಕೃಷ್ಣ ಮಠವು ಉತ್ತಮ ವಿದ್ಯಾರ್ಥಿಗಳನ್ನು ಹಾಗೂ ನಾಗರಿಕರನ್ನು ತಯಾರು ಮಾಡಿ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ ಎಂದು ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ ಮಠದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹರಾಜ್ ಹೇಳಿದರು.


ನಗರದ ಮಂಗಳೂರು ರಾಮಕೃಷ್ಣ ಮಠದ ಅಮೃತ ಮಹೋತ್ಸವ ಸಂಭ್ರಮ ಮತ್ತು ಅಮೃತ ಸಂಗಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಮಾನವನ ಸೇವೆಯಲ್ಲಿಯೇ ಭಗವಂತನನ್ನು ಕಾಣುವಂತೆ ತಿಳಿಸಿದ್ದಾರೆ. ಆದ್ದರಿಂದ ರಾಮಕೃಷ್ಣ ಮಠವು ಆಧ್ಯಾತ್ಮದ ಜೊತೆಜೊತೆಗೆ ಸಮಾಜ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಸನ್ಯಾಸಿಗಳು ಮತ್ತು ಜನಸಾಮಾನ್ಯರು ಜೊತೆಯಾಗಿ ಕೈ ಜೋಡಿಸಿ ಕೆಲಸ ಮಾಡಿದರೆ ಸಮಾಜದ ಏಳಿಗೆ ಸಾಧ್ಯ. ಇದರಿಂದ ಭಾರತದಲ್ಲಿ ಚೈತನ್ಯ ಮೂಡಲಿದೆ ಎಂದರು.


ನಾನು 50 ವರ್ಷಗಳ ಹಿಂದೆ ಮಠದ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ಕೇವಲ 50 ಮಂದಿಯಿದ್ದರು. ಆದರೆ ಇಂದು 2 ಸಾವಿರಕ್ಕಿಂತ ಹೆಚ್ಚು ಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಸಂಘಟನೆಯ ಶಕ್ತಿ ಬೇಕೆಂದು 100 ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ತಿಳಿಸಿದ್ದರು. ಅದರ ಮಹತ್ವ ಇಂದು ಗೊತ್ತಾಗುತ್ತಿದೆ. ಈ ಸಂಘವು ಸಣ್ಣ-ಸಣ್ಣ ಕೆಲಸ ಮಾಡಿಕೊಂಡು ಇಂದು ಒಂದು ದೊಡ್ಡ ಸಂಘವಾಗಿ ಬೆಳೆದಿದೆ ಎಂದು ಹೇಳಿದರು.


ಅಮೃತ ಮಹೋತ್ಸವದ ಸ್ಮರಣಿಕೆ ಬಿಡುಗಡೆ ಮಾಡಿ ಮಾತನಾಡಿದ ಪಶ್ಚಿಮ ಬಂಗಾಳ ಬೇಲೂರು ರಾಮಕೃಷ್ಣ ಮಠದ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ ಮಾತನಾಡಿ, ಮಂಗಳೂರು ರಾಮಕೃಷ್ಣ ಮಠದ 75 ವರ್ಷಗಳ ಮುನ್ನಡೆಯನ್ನು ನಾನು 62 ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಮಂಗಳೂರು ರಾಮಕೃಷ್ಣ ಮಠದ ಅದ್ಭುತವೂ, ಸಮಾಜಮುಖಿಯೂ ಆದ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಈ ಮಠದಲ್ಲಿ ತ್ಯಾಗ, ಸೇವೆ ಹಾಗೂ ಆಧ್ಯಾತ್ಮದ ಕಾರ್ಯಗಳ ಬಗ್ಗೆ ಯುವ ಜನತೆಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.


ರಾಮಕೃಷ್ಣ ಮಠದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ ನಿಟ್ಟೆ ವಿವಿಯ ಕುಲಾಧಿಪತಿ ಡಾ. ವಿನಯ್ ಹೆಗ್ಡೆಯವರು ಮಾತನಾಡಿ, ಸಮಾಜದ ಏಳಿಗೆಗೆ ಸ್ವಾಮಿ ಜಿತಕಾಮಾನಂದಜಿಯವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಇನ್ನೂ ಮುಂದೆಯೂ ಅವರಿಂದ ಈ ಕಾರ್ಯ ನೆರವೇರಲಿ ಎಂದು ಹೇಳಿದರು.


ರಾಮಕೃಷ್ಣ ಮಠದ ವೆಬ್‌ಸೈಟ್‌ ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು ಅವರು, ದೇಶಕ್ಕೆ ಸ್ವಾತಂತ್ರ್ಯ
ಬಂದು 75ನೇ ವರ್ಷಕ್ಕೆ ರಾಮಕೃಷ್ಣ ಮಠವು ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಜಗದ್ಗುರು ಭಾರತದ ಸಿದ್ಧಾಂತದಲ್ಲಿ ಭಾರತದ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಬೇಕು. ಭಾರತ ರಾಮರಾಜ್ಯವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಾಮನಾಗಬೇಕು. ಸ್ವಾಮಿ ವಿವೇಕಾನಂದರ ಹಾಗೂ ಗಾಂಧೀಜಿ ಅವರ ಕನಸನ್ನು ನನಸು ಮಾಡುವಲ್ಲಿ ರಾಮಕೃಷ್ಣ ಮಠ ಮುನ್ನಡೆಯುತ್ತಿದೆ ಎಂದರು.


ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ರಾಮಕೃಷ್ಣ ಮಠವು ಮಂಗಳೂರಿನ ಜನತೆಗೆ ವಿಶೇಷ ಕೊಡುಗೆಯನ್ನು ನೀಡಿದೆ. ಮಠ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಜನತೆಗೂ ಕೊಡುಗೆಯನ್ನು ನೀಡಿದೆ. ಪ್ರತೀ ದಿನ ಸಂಜೆ ಸ್ಥಳೀಯ ಬಡ ಮಕ್ಕಳಿಗೆ ಉಚಿತವಾಗಿ ಟ್ಯೂಷನ್ ನೀಡುತ್ತಿದ್ದು, ಉತ್ತಮ ಸಂಸ್ಕಾರವನ್ನು ನೀಡುವ ಕೇಂದ್ರವಾಗಿ ದೊಡ್ಡ ಕೆಲಸವನ್ನು ಮಾಡುತ್ತಿದೆ. 

 
ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ವಿಶೇಷ ಅಂಚೆ ಲಕೋಟೆಯನ್ನು ಹಸ್ತಾಂತರಿಸಿ ಮಾತನಾಡಿದರು. ಈ ಸಂದರ್ಭ ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ ಮಠದ,  ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹರಾಜ್ ಪಥದರ್ಶಿ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಉದ್ಯಮಿ ರವೀಂದ್ರ ಪೈ, ಗದಗದ ಮಾಜಿ ಶಾಸಕ ಡಿ.ಆರ್. ಪಾಟೀಲ್,ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ  ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ವಂದಿಸಿದರು.










Ads on article

Advertise in articles 1

advertising articles 2

Advertise under the article