-->

ಮಂಗಳೂರು ವಿವಿ ಕಾಲೇಜು ತರಗತಿಯಲ್ಲಿ ಸಾವರ್ಕರ್ ಫೋಟೋ ಹಾಕಿರುವ ವಿವಾದದ ಹಿನ್ನೆಲೆ ಹಲ್ಲೆ ಪ್ರಕರಣ: ಕಾಲೇಜಿಗೆ ಮುತ್ತಿಗೆ

ಮಂಗಳೂರು ವಿವಿ ಕಾಲೇಜು ತರಗತಿಯಲ್ಲಿ ಸಾವರ್ಕರ್ ಫೋಟೋ ಹಾಕಿರುವ ವಿವಾದದ ಹಿನ್ನೆಲೆ ಹಲ್ಲೆ ಪ್ರಕರಣ: ಕಾಲೇಜಿಗೆ ಮುತ್ತಿಗೆ

ಮಂಗಳೂರು: ನಗರದ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದದ ಮಧ್ಯೆಯೇ ತರಗತಿಯಲ್ಲಿ ಸಾವರ್ಕರ್ ಫೋಟೋ ಹಾಕಿರುವ ವಿವಾದವೊಂದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಇಂದು ಮಧ್ಯಾಹ್ನ ನಡೆದ ಈ  ಘರ್ಷಣೆಯಲ್ಲಿ ಎರಡೂ ತಂಡಗಳ ನಡುವೆ ಕೈ - ಕೈ ಮಿಲಾಯಿಸುವಿಕೆ ನಡೆದು ವಿದ್ಯಾರ್ಥಿಗಳು  ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕ ವಿದ್ಯಾರ್ಥಿ ಘಟಕ ಏಕಾಏಕಿಯಾಗಿ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ.

ಕಾಲೇಜು ಗೇಟ್ ಬಾಗಿಲ ಬಳಿ ಬಂದ ಪ್ರತಿಭಟನಾ ನಿರತರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ‌‌. ಪರಿಣಾಮ ಪ್ರತಿಭಟನಾಕಾರರು ಅಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಎಬಿವಿಪಿ ಹಾಗೂ ಕಾಲೇಜು ಪ್ರಾಂಶುಪಾಲೆ ವಿರುದ್ಧ ಘೋಷಣೆ ಕೂಗಲಾಯಿತು.

ಮಂಗಳೂರು ವಿವಿ ಕಾಲೇಜಿನಲ್ಲಿ 3-4 ದಿನಗಳ ಹಿಂದೆ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನು ಸಾವರ್ಕರ್ ಫೋಟೊವನ್ನು ಹಾಕಿದ್ದಾನೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ತಂಡವೊಂದು ಕಾಲೇಜು ಪ್ರಾಂಶುಪಾಲರಿಗೆ ಮನವಿ ಮಾಡಿದೆ. ಆದರೆ ಈ ಬಗ್ಗೆ ಅವರು ಕ್ರಮ ಕೈಗೊಳ್ಳುವ ಬದಲು 'ದೇಶದ್ರೋಹಿ' ಸಾವರ್ಕರ್ ಎಂಬ ಪದವನ್ನು ಉಲ್ಲೇಖಿಸಿರುವ ಬಗ್ಗೆ ಮನವಿ ನೀಡಿರುವ ವಿದ್ಯಾರ್ಥಿಗಳ ಮೇಲೆಯೇ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ ಇಂದು ಮೂವರು ವಿದ್ಯಾರ್ಥಿಗಳ ಮೇಲೆ 40 ಎಬಿವಿಪಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಈ ಪ್ರತಿಭಟನೆ ನಡೆಸಲಾಗಿದೆ.

ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳದ ಪ್ರಾಂಶುಪಾಲರನ್ನು ಅಮಾನತು ಮಾಡಬೇಕು. ಒಂದು ವಾರದೊಳಗೆ ಘರ್ಷಣೆಗೆ ಕಾರಣರಾದ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

Ads on article

Advertise in articles 1

advertising articles 2

Advertise under the article