ಒಂದೇ ಒಂದು ರೂಪಾಯಿ ಖರ್ಚು ಮಾಡದೆ ಅದ್ಧೂರಿ ವಿವಾಹವಾದ ನಯನತಾರಾ - ವಿಘ್ನೇಶ್ ಶಿವನ್ ಜೋಡಿ?

ಚೆನ್ನೈ: ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಲೇಡಿ ಸೂಪರ್​ಸ್ಟಾರ್​ ನಯನತಾರಾ ಅವರು ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದ್ದಾರೆ. ಅದಕ್ಕೆ ಕಾರಣ ಜೂನ್​ 9ರಂದು ನಯನಾತಾರಾ ತಮ್ಮ ಬಹುಕಾಲದ ಪ್ರೇಮಿ ಹಾಗೂ ಸಿನಿಮಾ ನಿರ್ದೇಶಕ ವಿಘ್ನೇಶ್​ ಶಿವಾನ್​ ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈನ ಮಹಾಬಲಿಪುರಂನ ರೆಸಾರ್ಟೊಂದರಲ್ಲಿ ಶಾಸ್ತ್ರೋಕ್ತವಾಗಿ ನಡೆದ ಇವರ ಮದುವೆ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಮತ್ತು ಸಾಕಷ್ಟು ಕಲಾವಿದರು ಪಾಲ್ಗೊಂಡಿದ್ದರು. ಇದೀಗ ನಯನಾತಾರಾ ಹಾಗೂ ವಿಘ್ನೇಶ್​ ಶಿವನ್ ನ ಮದುವೆಯ ಕುರಿತು ಇಂಟೆರೆಸ್ಟಿಂಗ್​ ಸುದ್ದಿಯೊಂದು ಬಯಲಾಗಿದೆ.

ಅದೇನಪ್ಪಾ ಅಂದರೆ, ತಮ್ಮ ಮದುವೆಗೆ ನಯನತಾರಾ ಒಂದೇ ಒಂದು ರೂಪಾಯಿ ಖರ್ಚು ಮಾಡದೇ ಅದ್ಧೂರಿ ವಿವಾಹವಾಗಿದ್ದಾರೆ. ಅದು ಹೇಗೆ ಸಾಧ್ಯವೆಂದು ಬೆರಗಾಗ್ತೀರಾ?. ಹೌದು ಜನಸಾಮಾನ್ಯರೇ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಮದುವೆಯಾಗ್ತಾರೆ. ಅಂತಹದರಲ್ಲಿ ಸ್ಟಾರ್​ ಕಲಾವಿದೆಯಾದ ನಯನತಾರಾ ಮದುವೆಗೆ ಕೋಟಿ ಕೋಟಿ ರೂ. ಖರ್ಚಾಗಿರಬೇಕಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ.

ಆದರೆ ಮೂಲಗಳ ಪ್ರಕಾರ ನಯನಾತಾರಾ ತಮ್ಮ ಮದುವೆಗೆ ಹಣ ಖರ್ಚು ಮಾಡಿಲ್ಲ ಎನ್ನಲಾಗುತ್ತಿದೆ. ವಿಘ್ನೇಶ್​ ಹಾಗೂ ಅವರ ಕುಟುಂಬಕ್ಕೆ ಉಡುಗೊರೆಯನ್ನು ಬಿಟ್ಟರೆ, ಮದುವೆಗೆಂದು ಒಂದು ನಯಾ ಪೈಸೆಯನ್ನೂ ಖರ್ಚು ಮಾಡಿಲ್ಲ. ಬದಲಾಗಿ ತಮ್ಮ ಮದುವೆಯಿಂದ ಹಣ ಸಂಪಾದನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ನಿಜಕ್ಕೂ ಅಚ್ಚರಿಯನ್ನು ಉಂಟುಮಾಡಿದೆ. 

ನಯನಾತಾರಾ ಹಾಗೂ ವಿಘ್ನೇಶ್ ಶಿವನ್ ಅದ್ಧೂರಿ ವಿವಾಹ ಸಮಾರಂಭದ ವೀಡಿಯೋವನ್ನು ಪ್ರಸಾರ ಮಾಡುವ ಹಕ್ಕನ್ನು ದೈತ್ಯ ಕಂಪೆನಿ ನೆಟ್​ಫ್ಲಿಕ್ಸ್​ ಪಡೆದುಕೊಂಡಿದೆ. ಅವರು ಈ ಅದ್ಧೂರಿ ಮದುವೆಗೆ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿರುವುದಲ್ಲದೆ, ವೀಡಿಯೋ ಪ್ರಸಾರ ಮಾಡಲು ಸಂಭಾವನೆಯನ್ನು ಸಹ ನೀಡಿದೆ. ಆದ್ದರಿಂದ ವಿಘ್ನೇಶ್​ ಮತ್ತು ನಯನಾತಾರಾ ಹಣ ಖರ್ಚು ಮಾಡಿಲ್ಲ. ಎಲ್ಲಾ ಖರ್ಚನ್ನು ನೋಡಿಕೊಂಡಿರುವ ನೆಟ್​ಫ್ಲಿಕ್ಸ್​ ವೀಡಿಯೋ ಹಕ್ಕು ಪಡೆಯಲು 25 ಕೋಟಿ ರೂ. ಹಣವನ್ನು ನೀಡಿದೆ ಎಂದು ಹೇಳಲಾಗಿದೆ. 

ಮದುವೆಗೆ ಬಂದಿದ್ದ ಅತಿಥಿಗಳು ಉಳಿದುಕೊಳ್ಳಲು ನಯನತಾರಾ ಮಹಾಬಲಿಪುರಂನ ಫೈವ್​ ಸ್ಟಾರ್​ ಹೋಟೆಲ್​ನಲ್ಲಿರುವ ಎಲ್ಲ ರೂಮ್​ಗಳನ್ನು ಬುಕ್​ ಮಾಡಿದ್ದರು. ಮದುವೆ ಸಮಾರಂಭಕ್ಕಾಗಿ ಬಂಗಾಳಕೊಲ್ಲಿಯ ಸಮುದ್ರ ತೀರದಲ್ಲಿ ಬೃಹತ್ ಗಾಜಿನ ಅರಮನೆಯನ್ನು ನಿರ್ಮಿಸಲಾಗಿತ್ತು. ಅತಿಥಿಗಳಿಗೆ ವ್ಯವಸ್ಥೆ ಮಾಡಿದ್ದ ಊಟಕ್ಕೆ 3500 ರೂ. ವೆಚ್ಚವಾಗಿದೆ. ದುಬಾರಿ ಮೇಕಪ್​ ಆರ್ಟಿಸ್ಟ್​ ಮತ್ತು ಸೆಕ್ಯುರಿಟಿ ಗಾರ್ಡ್ಸ್​ಗಳನ್ನು ಮುಂಬೈನಿಂದ ಕರೆಸಿಕೊಳ್ಳಲಾಗಿತ್ತು. ಈ ಮೇಲಿನ ಎಲ್ಲದಕ್ಕೂ ನೆಟ್​ಫ್ಲಿಕ್ಸ್​ ಸಂಸ್ಥೆ ಖರ್ಚ ಮಾಡಿದೆ ಎನ್ನಲಾಗಿದೆ. 

ಸದ್ಯ ಈ ನ್ಯೂಸ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಸ್ಟೈಲಿಶ್ ನಿರ್ದೇಶಕ ಗೌತಮ್ ಮೆನನ್ ವಿಘ್ನೇಶ್ ಶಿವನ್ ಮತ್ತು ನಯನಾತಾರಾ ಮದುವೆಯ ಸಂಚಿಕೆಯನ್ನು ನಿರ್ದೇಶಿಸಿದ್ದಾರೆ ಎಂದು ಹೇಳಲಾಗಿದೆ. ಬಹುಶಃ ಮೊದಲ ಬಾರಿಗೆ ಭಾರತೀಯ ಸೆಲೆಬ್ರಿಟಿ ಜೋಡಿಯ ವಿವಾಹ ಮಹೋತ್ಸವ ಒಟಿಟಿಯಲ್ಲಿ ಪ್ರಸಾರವಾಗಿದೆ ಎಂದು ಹೇಳಲಾಗಿದೆ.