Mangaluru- ಬುಲ್ಡೋಜರ್ ಮಾಡೆಲ್ ಅನುಸರಿಸುವ ಬಿಜೆಪಿ ನಾಯಕರು ಮೊದಲು ನನ್ನ ಎದೆಯ ಮೇಲೆ ಬುಲ್ಡೋಜರ್ ಹರಿಸಿ ನೋಡಲಿ: ಸುಹೈಲ್ ಕಂದಕ್ ಸವಾಲು

ಮಂಗಳೂರು: ದ.ಕ.ಜಿಲ್ಲೆಯಲ್ಲೂ ಬುಲ್ಡೋಜರ್ ಮಾಡೆಲ್ ಅನುಸರಿಸುತ್ತೇವೆ ಎಂಬ ಬಿಜೆಪಿ ನಾಯಕರು ತಾಕತ್ತಿದ್ದರೆ ಮೊದಲು ನನ್ನೆದೆಯ ಮೇಲೆ ಬುಲ್ಡೋಜರ್ ಹರಿಸಿ ನೋಡಲಿ. ಆ ಬಳಿಕ ನಮ್ಮ ಸಮುದಾಯದವರ ಮನೆ ಮೇಲೆ ಬುಲ್ಡೋಜರ್ ಹರಿಸಲಿ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಸವಾಲೆಸೆದರು.




ಸಂವಿಧಾನದ ಕಾನೂನಿನ ಯಾವ ಪರಿಚ್ಛೇದದಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ಅವಕಾಶವಿದೆ. ಅವರು ಮಾಡ್ತಿರೋದು ಅಕ್ರಮ, ಅದು ಅಸಂವಿಧಾನಿಕವಾಗಿದೆ. ಇದರ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ. ಕಷ್ಟಪಟ್ಟು ಕಟ್ಟಿರುವ ಮನೆಯನ್ನು ಕೆಡವಿ ಹಾಕುತ್ತಾರೆ. ಪ್ರತಿಭಟನೆ ಮಾಡಿದ್ದಾರೆ, ಧ್ವನಿ ಎತ್ತಿದ್ದಾರೆಂದು ದನಿ ಅಡಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಸಿ.ಟಿ.ರವಿಯವರು 1992ರಲ್ಲಿ ಬಾಬರಿ ಮಸೀದಿ ಕೆಡವಿ ಕೋಮು ಗಲಭೆ ಸೃಷ್ಟಿದ್ದಾರೆ‌‌. ಅಡ್ವಾನಿ, ಉಮಾಭಾರತಿ, ಬಿಜೆಪಿ ನಾಯಕರ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ಮಾಡುವ ತಾಕತ್ತು ಇದೆಯೇ. ಸಮಾಜವನ್ನು ಒಡೆದು ಹಿಂದೂ ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಲಾಗುತ್ತಿದೆ. ಜನರನ್ನು ಮತ ಬ್ಯಾಂಕ್ ಮೂಲಕ ಸೆಳೆಯುವಲ್ಲಿ ಬಿಜೆಪಿ ಸಫಲ ಆಗ್ತಾ ಇದೆ. ಪೊಲೀಸರು ಇಂತಹ ನಾಯಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸಮುದಾಯಗಳ ಬಗ್ಗೆ ಇವರು ಕಂದಕ ಸೃಷ್ಟಿ ಮಾಡ್ತಿದ್ದಾರೆ. ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಸಮುದಾಯದಲ್ಲಿ ಗೊಂದಲವಿದೆ. ಈ ಬಗ್ಗೆ ಸಮುದಾಯದ ನಾಯಕರು, ಉಲಮಾಗಳು ಸ್ಪಷ್ಟ ಸಂದೇಶ ಕೊಡಬೇಕಿದೆ ಎಂದು ಹೇಳಿದರು