ವಿಚಾರವಾದಿಯ ಸವಾಲಿಗೆ ಫ್ಲಾಪ್ ಉತ್ತರ ನೀಡಿದ ನಾಲ್ವರು ಜೋತಿಷ್ಯರು!

ಮಂಗಳೂರು: ಮಳಲಿ ಮಸೀದಿ - ಮಂದಿರದ ವಿಚಾರದಲ್ಲಿ ನಡೆದಿರುವ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಜ್ಯೋತಿಷಿಗಳಿಗೆ ನೀಡಿರುವ ವಿಶಿಷ್ಟ ಸವಾಲನ್ನು ಸ್ವೀಕರಿಸಿರುವ ನಾಲ್ವರು ಜೋತಿಷ್ಯರು ನಿಖರವಾದ ಉತ್ತರ ನೀಡಲು ವಿಫಲರಾಗಿದ್ದಾರೆ.

ವಿಚಾರವಾದಿ ನರೇಂದ್ರ ನಾಯಕ್ ಅವರು ಜೋತಿಷಿಗಳಿಗೆ ಸವಾಲೆಸೆದ ಮೇ 26ರಂದು ಬೆಳಗ್ಗೆ 11.33ಕ್ಕೆ ಏಳು ಬೇರೆ ಬೇರೆ ಲಕೋಟೆಗಳಲ್ಲಿ ವಿವಿಧ ದೇಶಗಳ ಕರೆನ್ಸಿ, ಕಾಗದಗಳು, ಬರವಣಿಗೆ ಬರೆದಿಟ್ಟ ಪೇಪರ್ ಅನ್ನು ಸೀಲ್ ಮಾಡಿ ಇಟ್ಟಿದ್ದರು. ಈ ಸವಾಲನ್ನು ಸ್ವೀಕರಿಸುವವರು ಏಳರಲ್ಲಿ ಆರು ಲಕೋಟೆಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದರೆ ಅವರಿಗೆ 1 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡಿದ್ದರಯ. ಸರಿ ಉತ್ತರವನ್ನು ನರೇಂದ್ರ ನಾಯಕ್ ಅವರ ವಾಟ್ಸ್ಆ್ಯಪ್ ಸಂಖ್ಯೆ ಹಾಗೂ ಇಮೈಲ್ ಗೆ ಕಳುಹಿಸಬಹುದು ಎಂದಿದ್ದರು. 

ಈ ಹಿಂದೆಯೇ ನರೇಂದ್ರ ನಾಯಕ್ ರವರು ಹೇಳಿರುವಂತೆ ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಏಳು ಲಕೋಟೆಗಳನ್ನು ತೆರೆಯಲಾಯಿತು. ಇದರಲ್ಲಿ ಮೊದಲನೆಯದ್ದು ಖಾಲಿ ಲಕೋಟೆ, 2ನೆಯ ಲಕೋಟೆಯಲ್ಲಿ ಪೇಪರ್ ನೊಳಗಿಟ್ಟ ಒಂದು ಡಾಲರ್ ನೋಟ್, 3ನೆಯ ಲಕೋಟೆಯಲ್ಲಿ 10 ದಿರಮ್ ನ ನೋಟ್, 4ನೆಯ ಕವರ್ ನಲ್ಲಿ ನೇಪಾಳದ 20 ರೂ. ನೋಟ್, 5ನೆಯ ಕವರ್ ನಲ್ಲಿ ಸಿಂಗಾಪುರದ 10 ಡಾಲರ್ ನ ಬಿಲ್, 6ನೆಯದ್ದರಲ್ಲಿ Astrology Flopped miserably Once ಎಂದು ಬರೆಯಲಾಗಿತ್ತು. 7ನೆಯರದ್ದರಲ್ಲಿ 10 ರೂ. ನ ಇಂಡಿಯಾದ ಕರೆನ್ಸಿ ಇಡಲಾಗಿತ್ತು.

ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು‌ ಜೋತಿಷಿಗಳು ಉತ್ತರ ಕಳುಹಿಸಿದ್ದಾರೆ. ಆದರೆ ನಾಲ್ವರು ನಿಖರವಾದ ಉತ್ತರ ನೀಡಲು ಸಫಲರಾಗಿಲ್ಲ. ಈ ನಾಲ್ಕು ಉತ್ತರದಲ್ಲಿ ಒಂದು ಕೇಳಿರುವ ಪ್ರಶ್ನೆಗೆ ಹೊರತಾಗಿರುವುದರಿಂದ ಮೂರನ್ನು ಮಾತ್ರ ಪರಿಗಣಿಸಲಾಗಿದೆ. ಇದರಲ್ಲಿ ಓರ್ವರು ಆರು ಖಾಲಿ ಲಕೋಟೆಗಳು ಎಂದು ಉತ್ತರಿಸಿದ್ದಾರೆ. ಮತ್ತೋರ್ವರು ಎಲ್ಲವೂ ಖಾಲಿ ಲಕೋಟೆಗಳು ಎಂದಿದ್ದಾರೆ. ಮತ್ತೊಬ್ಬರು ವಿವಿಧ ಲಕೋಟೆಗಳಲ್ಲಿ 500 ರೂ. ಕರೆನ್ಸಿ, ವೀಳ್ಯ, ಹೂ, ಕುಂಕುಮ - ಭಸ್ಮ, ಗಾಂಧಿ ಫೋಟೊ, ದೈವದ ಪೈಯಿಂಟಿಂಗ್ ಫೋಟೋ ಎಂದು ಉತ್ತರಿಸಿದ್ದಾರೆ. ಈ ಮೂಲಕ ಎಲ್ಲಾ ಉತ್ತರಗಳು ತಪ್ಪಾಗಿದೆ. ಈ ಮೂಲಕ ಜೋತಿಷ್ಯ ಸುಳ್ಳು ಎಂಬ ತಮ್ಮ ವಾದವೇ ಗೆದ್ದಿದೆ ಎಂದು ನರೇಂದ್ರ ನಾಯಕ್ ಅವರು ಹೇಳಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu