ಅಮೆಜಾನ್, ಗೂಗಲ್, ಫೇಸ್ಬುಕ್ ನಿಂದ ಕೆಲಸದ ಆಫರ್ ಪಡೆದ ವಿದ್ಯಾರ್ಥಿ: ಫೇಸ್ಬುಕ್ ಉದ್ಯೋಗ ನೆಚ್ಚಿದ ಈತನ ವಾರ್ಷಿಕ ಸಂಬಳ ಕೇಳಿದ್ರೆ ಹುಬ್ಬೇರಿಸ್ತೀರಾ!
Tuesday, June 28, 2022
ನವದಹಲಿ: ಒಂದೊಳ್ಳೆ ಕೆಲಸ ದೊರಕಿದರೆ ಸಾಕೆಂದು ಎಲ್ಲರೂ ಅಂದ್ಕೊಡಿರುತ್ತಾರೆ. ಆದರೆ ಮೂರು ಮೂರು ಕೆಲಸಗಳು ಒಟ್ಟೊಟ್ಟಿಗೆ ಮೂರು ಕೆಲಸ ದೊರಕಿಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು ಅಂದ್ಕೊಂಳ್ಳಬಹುದು.
ಇಂಥಹದ್ದೇ ಅದೃಷ್ಟವೊಂದು ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿಗೆ ಒಲಿದು ಬಂದಿದೆ. ಹೌದು. ಕೋಲ್ಕತ್ತದ ಜಾದವ್ಪುರ್ ವಿವಿ ವಿದ್ಯಾರ್ಥಿ ಬಿಸಾಖ್ ಮೊಂಡಲ್ ಗೆ ಸಾಮಾಜಿಕ ಜಾಲತಾಣ ದೈತ್ಯ ಕಂಪೆನಿ ಫೇಸ್ಬುಕ್ನಲ್ಲಿ ಕೆಲಸ ದೊರಕಿದೆ. ವಾರ್ಷಿಕವಾಗಿ 1.8 ಕೋಟಿ ರೂ. ಸಂಬಳ. ಇದು ಈ ವರ್ಷದಲ್ಲೇ ಫೇಸ್ಬುಕ್ ಸಂಸ್ಥೆ ವಿದ್ಯಾರ್ಥಿಯೊಬ್ಬನಿಗೆ ಆಫರ್ ಮಾಡಿರುವ ಅತಿ ದೊಡ್ಡ ಸ್ಯಾಲರಿ ಪ್ಯಾಕೇಜ್ ಆಗಿದೆ.
ಈತನಿಗೆ ಫೇಸ್ಬುಕ್ ಮಾತ್ರವಲ್ಲ, ಗೂಗಲ್ ಮತ್ತು ಅಮೆಜಾನ್ನಿಂದಲೂ ಉದ್ಯೋಗದ ಆಫರ್ ಬಂದಿತ್ತು. ಆದರೆ, ಅವೆರಡನ್ನೂ ಬದಿಗಿಟ್ಟು ಬಿಸಾಖ್ ಮೊಂಡಲ್ ಫೇಸ್ಬುಕ್ ಆಫರ್ ಅನ್ನು ಒಪ್ಪಿಕೊಂಡಿದ್ದಾರೆ. ಏಕೆಂದರೆ, ಗೂಗಲ್ ಹಾಗೂ ಅಮೆಜಾನ್ಗೆ ಹೋಲಿಸಿದರೆ ಫೇಸ್ಬುಕ್ ಸ್ಯಾಲರಿ ಪ್ಯಾಕೇಜ್ ಹೆಚ್ಚಾಗಿರುವ ಕಾರಣ ಬಿಸಾಕ್ ಈ ಆಫರ್ ಅನ್ನು ಒಪ್ಪಿಕೊಂಡಿದ್ದಾರಂತೆ.
ಸೆಪ್ಟೆಂಬರ್ ತಿಂಗಳಲ್ಲಿ ಫೇಸ್ಬುಕ್ಗೆ ಸೇರಲಿದ್ದಾರೆ. ಅಂದಹಾಗೆ ಬಿಸಾಕ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ನಾಲ್ಕನೇ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಮಂಗಳವಾರ ರಾತ್ರಿ ಅವರಿಗೆ ಕೆಲಸದ ಆಫರ್ ಸಿಕ್ಕಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಹಲವಾರು ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಹಾಗೂ ತನ್ನ ಪಠ್ಯಕ್ರಮದ ಅಧ್ಯಯನದ ಹೊರತಾಗಿ ಜ್ಞಾನವನ್ನು ಸಂಪಾದಿಸಲು ನನಗೆ ಅವಕಾಶ ಸಿಕ್ಕಿತು. ಇದರ ನೆರವಿನಿಂದ ನಾನು ಅನೇಕ ಸಂದರ್ಶನಗಳನ್ನು ಸುಲಭವಾಗಿ ಎದುರಿಸಿದೆ ಎಂದು ಬಿಸಾಕ್ ಹೇಳಿಕೊಂಡಿದ್ದಾರೆ.
ಬಿಸಾಖ್ ಮೊಂಡಲ್ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಸಾಧಾರಣ ಕುಟುಂಬದಿಂದ ಬಂದವರು. ಅವರ ತಾಯಿ ಅಂಗನವಾಡಿ ಕಾರ್ಯಕರ್ತೆ. ಮಾಧ್ಯಮ ವರದಿಗಳ ಪ್ರಕಾರ ಜಾದವ್ಪುರ್ ವಿಶ್ವವಿದ್ಯಾನಿಲಯದ ಸುಮಾರು 9 ವಿದ್ಯಾರ್ಥಿಗಳು ಕಳೆದ ವರ್ಷ ಸಾಗರೋತ್ತರ ಕಂಪೆನಿಗಳಿಂದ 1 ಕೋಟಿ ರೂ.ಗೂ ಅಧಿಕ ವಾರ್ಷಿಕ ಪ್ಯಾಕೇಜ್‌ಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.