
ಧರ್ಮಸ್ಥಳ: ದಾರಿ ಮಧ್ಯೆ ಬಿದ್ದಿರುವ ಮರಕ್ಕೆ ಢಿಕ್ಕಿಯಾಗಿ ಬೈಕ್ ಸವಾರ ಬಲಿ
6/14/2022 09:01:00 PM
ಮಂಗಳೂರು: ದಾರಿ ಮಧ್ಯೆ ಬಿದ್ದಿರುವ ಮರಕ್ಕೆ ಢಿಕ್ಕಿಯಾಗಿರುವ ಬೈಕ್ ಸವಾರರೋರ್ವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ನಾನಘಟ್ಟದ ಬಳಿ ನಡೆದಿದೆ.
ಬೆಳ್ತಂಗಡಿಯ ಓಡಿಲ್ನಾಲ ಮುಗುಳಿಛತ್ರ ನಿವಾಸಿ ವಸಂತ ಕುಮಾರ್ ಜೈನ್(42) ಮೃತಪಟ್ಟ ದುರ್ದೈವಿ.
ವಸಂತ ಕುಮಾರ್ ಜೈನ್, ಶ್ರೀಕ್ಷೇತ್ರ ಧರ್ಮಸ್ಥಳದ ಸ್ನಾನಘಟ್ಟದ ಬಳಿ ಹೊಟೇಲೊಂದನ್ನು ನಡೆಸುತ್ತಿದ್ದರು. ಎಂದಿನಂತೆ ಮುಂಜಾನೆ ಅವರು ಧರ್ಮಸ್ಥಳದಿಂದ ಸ್ನಾನಘಟ್ಟದೆಡೆಗೆ ಬೈಕ್ ನಲ್ಲಿ ಬರುತ್ತಿದ್ದರು. ಆದರೆ ಸ್ನಾನಘಟ್ಟದ ಬಳಿ ರಸ್ತೆಯಲ್ಲಿ ಮಧ್ಯೆ ಬಿದ್ದಿದ್ದ ಮರವನ್ನು ಗಮನಿಸದೆ ಬಂದಿದ್ದ ಅವರ ಬೈಕ್ ಮರಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ವಸಂತ ಕುಮಾರ್ ಜೈನ್ ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.