ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲೆಂದು ಆಂತರಿಕ ಭದ್ರತಾ ವಿಭಾಗದಡಿ (ಐಎಸ್‌ಡಿ) ನಗರ ಭಯೋತ್ಪಾದನಾ ನಿಗ್ರಹ ತಂಡದಲ್ಲಿ ಕರ್ತವ್ಯ ನಿರ್ವಹಿಸಲು 35 ಮಂದಿರುವ ತಂಡ ಸಜ್ಜಾಗಿದೆ.
ಈ ತಂಡವು 2 ತಿಂಗಳುಗಳ ಕಾಲ ಬೆಂಗಳೂರಿನ ಕೂಡ್ಲುವಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ (ಸಿಸಿಟಿ)ನಲ್ಲಿ ತರಬೇತಿ ಮುಗಿಸಿದ್ದು, ಇದೀಗ ಮಂಗಳೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್ ಮತ್ತು ದಿನೇಶ್ ಕುಮಾರ್ ಹಾಗೂ ತಂಡದ ಮುಖ್ಯಸ್ಥ ಸುಬ್ರಹ್ಮಣ್ಯ ಎಂ. ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖ ತಂಡವು ಗೌರವ ರಕ್ಷೆ ಸಲ್ಲಿಸಿತು.
ತಲಾ 15 ಮಂದಿಯನ್ನು ಒಳಗೊಂಡ ಈ ಎರಡು ತಂಡಗಳು ಕರ್ತವ್ಯ ನಿರ್ವಹಿಸುತ್ತದೆ. ರಜೆಯಲ್ಲಿರುವಾಗ ಕರ್ತವ್ಯ ನಿರ್ವಹಣೆಗೆಂದು ಐವರು ಹೆಚ್ಚುವರಿ ಸಿಬ್ಬಂದಿ ಇರುತ್ತಾರೆ. ಇವರಿಗೆ ಪ್ರತ್ಯೇಕ ಸಮವಸ್ತ್ರ ಕೂಡ ಇರಲಿದೆ.
 
   
 
 
 
 
 
 
 
 
 
 
 
 
 
 
 
 
 
