
ಎಲ್ಲರೂ ನೋಡು ನೋಡುತ್ತಿದ್ದಂತೆ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ 19 ರ ಯುವಕ
6/21/2022 09:09:00 PM
ಬಾಲೋದ್ (ಛತ್ತೀಸ್‌ಗಢ): ರೈಲ್ವೆ ಗೇಟ್ ಬಳಿ ಎಲ್ಲರೂ ನೋಡು ನೋಡುತ್ತಿದ್ದಂತೆ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟ ಘಟನೆಯೊಂದು ಛತ್ತಿಸಘಡದ ಗುಂಡರದೇಹಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ಆತ್ಮಹತ್ಯೆಯ ಈ ವೀಡಿಯೋ ಭಾರೀ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ನೆಟ್ಟಿಗರು ಭಯಭೀತರಾಗುತ್ತಿದ್ದಾರೆ.
ರೈಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆಯ ಗೇಟ್ ಹಾಕಲಾಗಿತ್ತು. ರೈಲು ಬರುತ್ತಿದ್ದನ್ನು ಗಮನಿಸಿದ ಯುವಕ ಎಲ್ಲರೂ ನೋಡುನೋಡುತ್ತಿದ್ದಂತೆ ನೇರ ಹಳಿಯ ಮೇಲೆ ಬಂದು ಮಲಗಿದ್ದಾನೆ. ಕ್ಷಣಾರ್ಧದಲ್ಲಿ ಆಗಮಿಸಿದ ರೈಲು ಯುವಕನ ಪ್ರಾಣ ಪಕ್ಷಿಯನ್ನೇ ಕೊಂಡೊಯ್ದಿದೆ.
ರೈಲು ಹರಿದ ಪರಿಣಾಮ ಯುವಕನ ದೇಹ ಛಿದ್ರಛಿದ್ರಗೊಂಡಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವಕನ ಛಿದ್ರವಾಗಿರುವ ಮೃತದೇಹವನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಆತ್ಮಹತ್ಯೆ ಮಾಡಿಕೊಂಡ ಯುವಕ ಆನಂದ ನಿಶಾದ್(19) ಎಂದು ಗುರುತಿಸಲಾಗಿದೆ. ಈತ ಗುಂಡರದೇಹಿಯ ಬಾಗ್ಮಾರಾ ನಿವಾಸಿ ಎನ್ನಲಾಗುತ್ತಿದೆ.
ಘಟನೆ ನಡೆದ ಸಂದರ್ಭ ಬೈಕ್ ಸವಾರನೊಬ್ಬ ಆಕಸ್ಮಿಕವಾಗಿ ವೀಡಿಯೋ ಮಾಡಿದ್ದ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸೆರೆಯಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಆತ್ಮಹತ್ಯೆ ಕಾರಣದ ತಿಳಿದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.