ಹಾರ ಬದಲಿಸುವಾಗ ವರನ ಕೈ ತಾಗಿರೋದಕ್ಕೆ ಮುನಿಸಿಕೊಂಡ ವಧು: ಮದುವೆಯೇ ರದ್ದು

ಬೆಳ್ತಂಗಡಿ(ದಕ್ಷಿಣ ಕನ್ನಡ): ಮದುವೆ ನಡೆಯುತ್ತಿದ್ದ ವೇಳೆ ವಧುವಿನ  ಕೊರಳಿಗೆ ವರ ಹಾರ ಹಾಕುತ್ತಿದ್ದಾಗ ಕೈತಾಗಿತೆಂದು ಕೋಪಗೊಂಡು ಹಾರವನ್ನು ಕತ್ತಿನಿಂದೆಸೆದು ಬಿಸಾಡಿ ವಧು ಮದುವೆಯನ್ನೇ ನಿರಾಕರಿಸಿರುವ ವಿಚಿತ್ರ ಘಟನೆಯೊಂದು ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಾರಾವಿಯ ಕಲ್ಯಾಣ ಮಂಟಪವೊಂದರಲ್ಲಿ ಇಂತಹ ವಿಚಿತ್ರ ಘಟನೆಯೊಂದು ನಡೆದಿದೆ. ನಾರಾವಿ ನಿವಾಸಿ ವರನಿಗೆ ಮೂಡುಕೊಣಾಜೆಯ ಯುವತಿಯೊಂದಿಗೆ ವಿವಾಹ ನಡೆಯುತ್ತಿತ್ತು. ಈ ವೇಳೆ ಸಂಪ್ರದಾಯದಂತೆ ವಧುವಿನ ಕೊರಳಿಗೆ ವರನು ಹಾರ ಹಾಕುತ್ತಿದ್ದ‌‌. ಆಗ ವಧುವಿನ ಕೈಗೆ ವರನ ಕೈತಾಗಿತೆಂದು ಕೋಪಗೊಂಡ ವಧು ಹಾರವನ್ನೇ ಕುತ್ತಿಗೆಯಿಂದ ತೆಗೆದು ಬಿಸಾಡಿ ವರನಿಗೆ ಬೈದಿದ್ದಾಳೆ. 

ಪರಿಣಾಮ ಅಲ್ಲಿ ಕೊಂಚ ಗೊಂದಲದ ವಾತಾವರಣ ಉಂಟಾಗಿ ವರನ ಹಾಗೂ ವಧುವಿನ ಕಡೆಯವರ ನಡುವೆ ಜಗಳ ನಡೆದಿದೆ. ತಕ್ಷಣ ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಾನ ಪಡಿಸಿದರೂ ವರ ಮದುವೆಯನ್ನು ನಿರಾಕರಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ ಮದುವೆಗೆಂದು ಸುಮಾರು ಸಾಲ ಮಾಡಿದ್ದು ಖರ್ಚಾಗಿರುವ ಎಲ್ಲಾ ಹಣವನ್ನು ಹುಡುಗಿಯ ಕಡೆಯವರೇ ನೀಡಬೇಕು ಎಂದು ಹಠ ಹಿಡಿದಿದ್ದಾನೆ. ಈ ಬಗ್ಗೆ ಎರಡೂ ಕಡೆಯವರನ್ನೂ ಮನವೊಲಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
BREAKING NEWS
Loading latest news...
Join our WhatsApp Channel Powered By : Online Pudu