
ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ಕಿರುತರೆ ನಟಿ ಚೇತನಾ ರಾಜ್ ಸಾವು ಪ್ರಕರಣ: ಮರಣೋತ್ತರ ವರದಿ ಬಂದ ಬಳಿಕ ತನಿಖೆ
Wednesday, May 18, 2022
ಬೆಂಗಳೂರು: ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ಕಿರುತರೆ ನಟಿ ಚೇತನಾ ರಾಜ್ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ನಟಿ ಚೇತನಾ ರಾಜ್(21) ದೇಹದ ಕೊಬ್ಬಿನಾಂಶ ತೆಗೆದು ಹಾಕುವ(ಪ್ಯಾಟ್ ಸರ್ಜರಿ) ಚಿಕಿತ್ಸೆಗಾಗಿ ನವರಂಗ್ ಸರ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನಾಂಶ ಶೇಖರಣೆಯಾಗಿದ್ದರಿಂದ ಆಕೆ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಸೀರಿಯಲ್ ಗಳಲ್ಲಿ ಚೇತನಾ ರಾಜ್ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟನೆ ಮಾಡಿದ್ದರು. ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ನಟಿ ಚೇತನಾ ರಾಜ್ ಕುಟುಂಬ ವಾಸವಾಗಿತ್ತು.
ಪುತ್ರಿಯ ಸಾವಿನ ಕುರಿತು ಆಕೆಯ ತಂದೆ ಗೋವಿಂದ ರಾಜ್ ಪ್ರತಿಕ್ರಿಯಿಸಿ, 'ನಿನ್ನೆ ಬೆಳಗ್ಗೆ 8.30ರ ಸುಮಾರಿಗೆ ಚೇತನಾ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನಮಗೆ ಈ ವಿಚಾರ ತಿಳಿದು, ಆಸ್ಪತ್ರೆಗೆ ಬರುವ ಹೊತ್ತಿಗೆ ವೈದ್ಯರು ಸರ್ಜರಿ ನಡೆಸುತ್ತಿದ್ದರು. ಸಂಜೆ ಹೊತ್ತಿಗೆ ಅವಳ ಶ್ವಾಸಕೋಶದಲ್ಲಿ ಕೊಬ್ಬಿನ ಅಂಶ ತುಂಬಿ ಉಸಿರಾಟದ ತೊಂದರೆಯಾಗಿದೆ. ಆಸ್ಪತ್ರೆಯಲ್ಲಿ ಐಸಿಯು ಸೇರಿದಂತೆ ಯಾವುದೇ ವ್ಯವಸ್ಥೆ ಸರಿಯಾಗಿಲ್ಲ. ಈ ಹಿಂದೆ ಕೂಡ ಚೇತನಾ ರಾಜ್ ಫ್ಯಾಟ್ ಸರ್ಜರಿಗೆ ಮಾಡಿಸಿಕೊಳ್ಳುವೆ ಎಂದು ಹೇಳಿದ್ದಳು. ನಾವೇ ಬೇಡ ಎಂದು ಹೇಳಿದ್ದೆವು. ಹಾಗಾಗಿ ನಮ್ಮ ಗಮನಕ್ಕೆ ಬಾರದೇ ಸರ್ಜರಿಗೆ ಬಂದಿದ್ದಾಳೆ. ಆಸ್ಪತ್ರೆ ನಿರ್ಲಕ್ಷ್ಯದಿಂದಲೇ ನನ್ನ ಪುತ್ರಿ ಸಾವನ್ನಪ್ಪಿದ್ದಾಳೆ. ಅಗತ್ಯ ಸಲಕರಣೆ ಹಾಗೂ ಪೋಷಕರ ಒಪ್ಪಿಗೆ ಇಲ್ಲದೆ ವೈದ್ಯರು ಸರ್ಜರಿಗೆ ಮುಂದಾಗಿದ್ದಾರೆ' ಎಂದು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ 'ಅಸಹಜ ಸಾವು' ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಭಾರತೀಯ ವೈದ್ಯಕೀಯ ಮಂಡಳಿಗೆ ಕಳುಹಿಸಿ ಅಭಿಪ್ರಾಯ ಕೇಳಲಾಗುತ್ತದೆ. ಇದರನ್ವಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ. ತನಿಖೆಯ ವೇಳೆ ನಿರ್ಲಕ್ಷ್ಯ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಜುನಾಥ್ ನಗರದ ಕಾಡೇ ಆಸ್ಪತ್ರೆ ವೈದ್ಯ ಡಾ.ಶೆಟ್ಟಿಯವರು ಕಾಸ್ಮೆಟಿಕ್ ಆಸ್ಪತ್ರೆಯ ಅರವಳಿಕೆ ತಜ್ಞ ಡಾ.ಮೆಲ್ವಿನ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೋಮವಾರ ಸಂಜೆ 5.30ಕ್ಕೆ ಏಕಾಏಕಿ ಡಾ.ಮೆಲ್ವಿನ್ ಅವರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಕರೆತಂದು ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್‌ಗಳು ಪ್ರಶ್ನಿಸಿದ್ದಾರೆ. ಆದರೆ ಆಗ ಆತ ಬೆದರಿಕೆಯೊಡ್ಡಿ. ಆಸ್ಪತ್ರೆಯೊಳಗೆ ಒತ್ತಾಯಪೂರ್ವಕವಾಗಿ ರೋಗಿಯನ್ನು ಕರೆತಂದು ತುರ್ತು ನಿಗಾ ಘಟಕದಲ್ಲಿ ಸೇರಿಸಿದ್ದಾರೆ.
ವಿಚಾರ ತಿಳಿದು ವೈದ್ಯರು ಐಸಿಯುಗೆ ಹೋದಾಗ ಆಕೆಗೆ ಹೃದಯಾಘಾತವಾಗಿದೆ. ಹೀಗಿದ್ದರೂ ಚಿಕಿತ್ಸೆ ನೀಡುವಂತೆ ಬೆದರಿಕೆ ಒಡ್ಡಿದ್ದಾರೆ. ಅದಕ್ಕೂ ಮೊದಲು ಆಕೆಗೆ ಯಾವ ಚಿಕಿತ್ಸೆ ನೀಡಲಾಗಿತ್ತು. ಏನಾಗಿದೆ ಎಂಬುದರ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಉತ್ತರ, ದಾಖಲೆಯನ್ನು ಕೊಟ್ಟಿಲ್ಲ. ಕೊನೆಗೆ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನಾಡಿಮಿಡಿತ, ಹೃದಯಬಡಿತ ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲಾ ರೀತಿಯ ಪ್ರಯತ್ನ ಮಾಡಿ ಕೊನೆಗೆ ಅವರು ಮೃತಪಟ್ಟಿರುವುದಾಗಿ ಘೋಷಣೆ ಮಾಡಲಾಗಿದೆ. ಕಾಡೇ ಆಸ್ಪತ್ರೆಗೆ ಬರುವ ಮೊದಲೇ ಅವರು ಅಸುನೀಗಿದ್ದು, ವಿಷಯ ತಿಳಿಸದೆ ಡಾ.ಮೆಲ್ವಿನ್ ರೋಗಿಯನ್ನು ಕರೆತಂದು ಅಪ್ಪಣೆ ಇಲ್ಲದೆ ಒಳಗೆ ದಾಖಲು ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ದೂರಿನಲ್ಲಿ ಮನವಿ ಮಾಡಿದ್ದಾರೆ.