ಸಹಪಾಠಿಗಳಿಗೆ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಬೆಂಗಳೂರು : ಐಷಾರಾಮಿ ಜೀವನ ನಡೆಸಲೆಂದು ಸಹಪಾಠಿಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಇಬ್ಬರು ಮಾದಕವಸ್ತು ದಂಧೆಕೋರ ವಿದ್ಯಾರ್ಥಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ತಮಿಳುನಾಡು ಮೂಲದ ಮನೋರಂಜಿತ್ (20) ಹಾಗೂ ಸಂಗೇಶ್ (20) ಬಂಧಿತ ದಂಧೆಕೋರರು.

ತಮಿಳುನಾಡಿನ ಕೊಯಮತ್ತೂರು ಮೂಲದವರಾದ ಆರೋಪಿಗಳಾದ ಮನೋರಂಜಿತ್ ಹಾಗೂ ಸಂಗೇಶ್ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಸ್ವತಃ ಮಾದಕ ವ್ಯಸನಿಗಳಾಗಿದ್ದ ಇವರು, ತಮಿಳುನಾಡಿನಿಂದ ಎಂಡಿಎಂಎ ಮಾದಕವಸ್ತುವನ್ನು ತರಿಸಿಕೊಂಡು ಕಾಲೇಜಿನಲ್ಲಿ ತಮ್ಮ ಆಪ್ತರಿಗೆ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಈ ಇಬ್ಬರು ಆರೋಪಿಗಳ ಗ್ರಾಹಕರಾಗಿದ್ದಾರು. ಮಾದಕವಸ್ತುಗಳ ಮಾರಾಟ ದಂಧೆಯಿಂದ ಬಂದ ಹಣದಲ್ಲಿ ಇವರು ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಸದ್ಯ ಆರೋಪಿಗಳನ್ನು ಬಂಧಿಸಿರುವ ಗಿರಿನಗರ ಠಾಣೆ ಪೊಲೀಸರು 51 ಎಂಡಿಎಂಎ ಮಾತ್ರೆಗಳನ್ನ ವಶಪಡಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.