ಪತ್ನಿಯ ಕೊಲೆ ಮಾಡಿದ್ದ ಆರೋಪದಲ್ಲಿ ಜೈಲು ಪಾಲಾದ ಪತಿ: ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ
Tuesday, May 3, 2022
ಬಿಹಾರ: ಪತ್ನಿಯನ್ನು ಕೊಲೆಗೈದಿರುವುದಾಗಿ ಪತಿಯನ್ನು ಕಂಬಿ ಎಣಿಸುವಂತೆ ಮಾಡಿದ ಆಕೆಯ ಕುಟುಂಬಸ್ಥರು ಪುತ್ರಿ ಬಾರದ ಲೋಕಕ್ಕೆ ಹೋಗಿಬಿಟ್ಟಳು ಎಂದು ನೋವಿನಲ್ಲೇ ದಿನದೂಡುತ್ತಿದ್ದರು. ಆದರೆ ಪೊಲೀಸರ ತನಿಖೆಯಿಂದ ದೊಡ್ಡ ತಿರುವು ದೊರಕಿದ್ದು, ಆಕೆ ಪ್ರಿಯಕರನೊಂದಿಗೆ ಪರಾರಿಯಾಗಿರುವುದು ಬಹಿರಂಗಗೊಂಡಿದೆ.
ಇದಾವುದೋ ಸಿನಿಮಾ ಕಥೆಯಲ್ಲ. ಬದಲಾಗಿ ಬಿಹಾರದ ಮೋತಿಹಾರಿ ಎಂಬ ಪ್ರದೇಶದಲ್ಲಿ ನಡೆದಿರುವ ನೈಜ ಘಟನೆ. ಕೇಸರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದ ನಿವಾಸಿ ದಿನೇಶ್ ರಾಮ್ ಎಂಬಾತ 2014ರಲ್ಲಿ ಶಾಂತಿ ದೇವಿ ಎಂಬಾಕೆಯನ್ನು ವಿವಾಹವಾಗಿದ್ದ. ಆರಂಭದಲ್ಲಿ ದಂಪತಿಯ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಕೆಲ ತಿಂಗಳ ಹಿಂದೆ ಶಾಂತಿ ದೇವಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾಳೆ.
ಪತ್ನಿ ಶಾಂತಿ ದೇವಿಗಾಗಿ ದಿನೇಶ್ ಎಷ್ಟು ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿರಲಿಲ್ಲ. ಈ ನಡುವೆ ಶಾಂತಿ ದೇವಿ ಮನೆಯವರು ಅಳಿಯನ ಮೇಲೆ ಅನುಮಾನಗೊಂಡ ತಂದೆ ಯೋಗೇಂದ್ರ, ವರದಕ್ಷಿಣೆ ಕಿರುಕುಳ ನೀಡಿ ತನ್ನ ಪುತ್ರಿಯನ್ನು ಅಳಿಯನೇ ಕೊಲೆಗೈದು ಮೃತದೇಹವನ್ನು ಎಲ್ಲಿಯೋ ಬಿಸಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೊಲೆ ಆರೋಪದ ಮೇರೆಗೆ ದಿನೇಶ್ನನ್ನು ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗಟ್ಟಿದ್ದರು. ಆದರೆ ದಿನೇಶ್ ಹೇಳಿಕೆಯಿಂದ ಈ ಪ್ರಕರಣದ ಬಗ್ಗೆ ಅನುಮಾನಗೊಂಡ ಎಸ್‌ಎಚ್‌ಒ ಇನ್ಸ್ಪೆಕ್ಟರ್ ಶೈಲೇಂದ್ರ ಸಿಂಗ್ ತನಿಖೆ ಮುಂದುವರಿಸಿದ್ದರು. ಎಲ್ಲರೂ ಸತ್ತಿದ್ದಾಳೆಂದು ನಂಬಿದ್ದ ಯುವತಿ ಪಂಜಾಬ್‌ನ ಜಲಂಧರ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ವಾಸಿಸುತ್ತಿರುವುದನ್ನ ಪತ್ತೆ ಮಾಡಿದ್ದಾರೆ. ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಹಿಳೆಯನ್ನು ಮೋತಿಹಾರಿಗೆ ಪೊಲೀಸರು ಕರೆತಂದಿದ್ದಾರೆ. ಅಲ್ಲದೆ ಸುಳ್ಳು ಆರೋಪ ಮಾಡಿ ನಿರಪರಾಧಿಗೆ ಶಿಕ್ಷೆ ಆಗುವಂತೆ ಮಾಡಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.