ಕೋಮು ಹಿಂಸಾಚಾರದ ಬೆಂಕಿಯಿಂದ ಹಸುಗೂಸನ್ನು ರಕ್ಷಿಸಿದ ಆರಕ್ಷಕ!

ಕರೌಲಿ, ರಾಜಸ್ಥಾನ: ರಾಜಸ್ಥಾನದ ಕರೌಲಿಯಲ್ಲಿ ಎಪ್ರಿಲ್ 2ರಂದು ಕೋಮು ಹಿಂಸಾಚಾರ ಭುಗಿಲೆದ್ದಿದೆ.  ಪರಿಣಾಮ ಗಲ್ಲಿ ಗಲ್ಲಿಗಳು ಹೊತ್ತಿ ಉರಿಯಿತು. ಅಂಗಡಿಗಳು, ವಾಹನಗಳು, ಸುಟ್ಟು ಭಸ್ಮವಾಯಿತು. ಆಸ್ತಿ-ಪಾಸ್ತಿಗಳು ಹಾನಿಗೊಳಗಾಗಿತ್ತು. ಈ ವೇಳೆ ಬೆಂಕಿಗಾಹುತಿಯಾಗುತ್ತಿದ್ದ ಎರಡು ಅಂಗಡಿಗಳ ನಡುವೆಯಿದ್ದ ಮನೆಯಲ್ಲಿದ್ದ ಪುಟ್ಟ ಕಂದಮ್ಮನನ್ನು ಪೊಲೀಸ್ ಕಾನ್ಸ್​ಟೇಬಲ್‌ ರಕ್ಷಿಸಿ ಸಾಹಸ ಮೆರೆದಿದ್ದಾರೆ. ಇದೀಗ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೊಲೀಸ್ ಕಾನ್ಸ್​ಟೇಬಲ್ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುಗಾದಿ ಹಬ್ಬದಂದು ಹೊಸ ವರ್ಷಾಚರಣೆ ಅಂಗವಾಗಿ ಕರೌಲಿಯ ಮುಸ್ಲಿಂ ಪ್ರಾಬಲ್ಯದ ಪ್ರದೇಶವೊಂದರಲ್ಲಿ ಬೈಕ್ ರ್‍ಯಾಲಿ ಹೋಗುತ್ತಿತ್ತು. ಈ ವೇಳೆ ಕಲ್ಲು ತೂರಾಟ ನಡೆದಿದೆ. ಬಳಿಕದ ಕೆಲವೇ ಕ್ಷಣಗಳಲ್ಲಿ ಕೋಮು ಹಿಂಸಾಚಾರ ಆರಂಭವಾಗಿದೆ. ಪರಿಣಾಮ ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಅಲ್ಲಿಯೇ ಪರಿಸ್ಥಿತಿಯನ್ನು ನಿಯಂತ್ರಣ ಮಾಲು ನೇಮಕಗೊಂಡಿದ್ದ ಕಾನ್ಸ್​​ಟೇಬಲ್ ನೇತ್ರೇಶ್ ಶರ್ಮಾ ಎಂಬುವರು ಹಸುಗೂಸೊಂದನ್ನು ಬೆಂಕಿಯಿಂದ ರಕ್ಷಣೆ ಮಾಡಿದ್ದಾರೆ.  

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನ್ಸ್​​ಟೇಬಲ್ ನೇತ್ರೇಶ್ ಶರ್ಮಾ,ಆ ಎರಡು ಅಂಗಡಿಗಳ ನಡುವೆ ಮನೆಯೊಂದಿರುವುದು ನನ್ನ ಗಮನಕ್ಕೆ ಬಂದಿದೆ. ಆ ಮನೆಯಲ್ಲಿ ಮಹಿಳೆಯೋರ್ವರು ಸಿಲುಕಿಕೊಂಡಿದ್ದು, ಹಸುಗೂಸೊಂದನ್ನು ಕೈಯಲ್ಲಿ ಹಿಡಿದುಕೊಂಡು 'ಕಾಪಾಡಿ' ಎಂದು ಕೂಗಿಕೊಳ್ಳುತ್ತಿದ್ದರು. ತಕ್ಷಣ ಅಲ್ಲಿಗೆ ಧಾವಿಸಿದ ನಾನು ಮಗುವನ್ನು ತೆಗೆದುಕೊಂಡು ನನ್ನ ಹಿಂದೆಯೇ ಬರುವಂತೆ ಅವರಿಗೆ ಹೇಳಿದೆ. ಮಗವನ್ನು ಹೊರಗೆ ತೆಗೆದುಕೊಂಡು ಬಂದು ಅವರಿಗೆ ನೀಡಿದೆ. ಇದು ನನ್ನ ಜವಾಬ್ದಾರಿ ಅಷ್ಟೇ' ಎಂದಿದ್ದಾರೆ.

ಆದರೆ ನೇತ್ರೇಶ್ ಶರ್ಮಾರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಅವರು ಮಗುವನ್ನು ರಕ್ಷಿಸುವ ಫೋಟೋ ಕೂಡಾ ಭಾರೀ ವೈರಲ್ ಆಗುತ್ತಿದೆ.