ಕಂಬಳ ಕ್ರೀಡೆಗೆ ಹೊಸ ಆಯಾಮ: ಅಸೋಸಿಯೇಷನ್ ರಚನೆಗೆ ಸರಕಾರದ ನಿರ್ಧಾರ
ರಾಜ್ಯದ ಕರಾವಳಿಯಲ್ಲಿ ಶತಮಾನಗಳಿಂದ ಐತಿಹಾಸಿಕ ಪರಂಪರೆಯಿರುವ ಕಂಬಳ ಕ್ರೀಡೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಂಬಳ ಅಸೋಸಿಯೇಷನ್ ರಚಿಸಲು ಸರ್ಕಾರ ನಿರ್ಧರಿಸಿದೆ.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ 19-04-2022ರಂದು ವಿಧಾನ ಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ತೆಗೆದು ಕೊಳ್ಳಲಾಗಿದೆ.
ಮಾರ್ಚ್ ತಿಂಗಳಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷದ್ ಸದಸ್ಯರಾದ ಮಂಜುನಾಥ ಭಂಡಾರಿ ಹಾಗೂ ಇತರ ಸದಸ್ಯರು ಈ ವಿಷಯ ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಸಭಾಪತಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಕಂಬಳ ಕ್ರೀಡೆಯನ್ನು ಹೆಚ್ಚು ಸಂಘಟಿತವಾಗಿ ಮತ್ತು ಪರಿಣಾಮಕಾರಿಯಾಗಿ ಆಯೋಜಿಸಲು ರಾಜ್ಯ ಮಟ್ಟದ ಕಂಬಳ ಅಸೋಸಿಯೇಷನ್ ರಚಿಸಬೇಕು. ಇದಕ್ಕೆ ಕ್ರೀಡಾ ಇಲಾಖೆಯ ಅನುಮೋದನೆ, ರಾಜ್ಯ ಸರಕಾರದಿಂದ ಅನುದಾನ ಪಡಯಬೇಕು.
ಬಳಿಕ ಎಲ್ಲ ಜಿಲ್ಲಾ ಮತ್ತು ಸ್ಥಳೀಯ ಕಂಬಳ ಸಮಿತಿಗಳನ್ನು ರಾಜ್ಯ ಮಟ್ಟದ ಅಸೋಸಿಯೇಷನ್ ನಲ್ಲಿ ನೋಂದಾಯಿಸಿ ಪ್ರತ್ಯೇಕ ಬೈಲಾ ರಚಿಸಿ ಸ್ಥಳೀಯ ಕಂಬಳ ಸಮಿತಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೇಲ್ಮನೆಯಲ್ಲಿ ನಡೆದ ಚರ್ಚೆ ಮತ್ತು ಅಭಿಪ್ರಾಯಗಳಿಗೆ ಪೂರಕವಾಗಿ ಸಭಾಪತಿ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಹಾಜರಿದ್ದು, ಕಂಬಳ ಅಸೋಸಿಯೇಷನ್ ರಚನೆಗೆ ನಿರ್ಧರಿಸಲಾಗಿದೆ.
ಇದೊಂದು ಮಹತ್ವದ ನಿರ್ಧಾರ. ಈ ನಿರ್ಧಾರದಿಂದ ಕಂಬಳ ಕ್ರೀಡೆಗೆ ಹೊಸ ಆಯಾಮ ದೊರೆತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.
