ನಿತ್ಯ ಕಿರುಕುಳ ‌ನೀಡಿದ ಪತಿಯನ್ನು ಬೆಂಕಿ ಹಚ್ಚಿ ಕೊಂದ ಪತ್ನಿ!

ಪ್ರಕಾಶಂ: ಪ್ರತಿನಿತ್ಯ ಪತಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಪತ್ನಿಯೊಬ್ಬಳು ಆತನ ಮೇಲೆ ಪೆಟ್ರೋಲ್​ ಎರಚಿ ಬೆಂಕಿ ಹಚ್ಚಿ ಕೊಲೆ ಗೈದಿರುವ ಘಟನೆ ಸಂತನೂತಲ ಪಾಡು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಮದ್ದಿಪಾಡು ತಾಲೂಕಿನ ಗಾಜುಲಪಾಲೇ ನಿವಾಸಿ ಕ್ರಿಷ್ಟಿಪಾಟಿ ಕೃಷ್ಣಾ ರೆಡ್ಡಿ (31) ಎಂಬಾತ ಮೃತಪಟ್ಟವ್ಯಕ್ತಿ. ಈತನಿಗೆ ಸಂತನೂತಲಪಾಡು ನಿವಾಸಿ ರುಕ್ಮಿಣಿ ಎಂಬಾಕೆಯೊಂದಿಗೆ 2011ರಲ್ಲಿ ಮದುವೆಯಾಗಿದ್ದರು. ಪ್ರೇಮ ವಿವಾಹವಾಗಿದ್ದ ಈ ದಂಪತಿಗೆ ಐದು ವರ್ಷದ ಪುತ್ರನಿದ್ದಾನೆ.  

ಸಾರಾಯಿ ಚಟವನ್ನು ಹೊಂದಿದ್ದ ಕೃಷ್ಣರೆಡ್ಡಿ ನಿತ್ಯ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕಳೆದ ಮೂರು ದಿನಗಳಿಂದ ಕೃಷ್ಣಾರೆಡ್ಡಿ ತನ್ನ ಪತ್ನಿ ರುಕ್ಮಿಣಿಗೆ ದೈಹಿಕ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ, ಇಬ್ಬರ ಮಧ್ಯೆ ಜಗಳ ಮಿತಿ ಮೀರಿದೆ.

ಸೋಮವಾರ ಸಂಜೆ ಮತ್ತೆ ಮದ್ಯ ಸೇವನೆ ಮಾಡಿ ಬಂದು ತನ್ನ ಪತ್ನಿಯೊಂದಿಗೆ ಕೃಷ್ಣಾ ರೆಡ್ಡಿ ಜಗಳವಾಡಿದ್ದಾನೆ. ಈ ವೇಳೆ ಕೋಪಗೊಂಡ ರುಕ್ಮಿಣಿ ತನ್ನ ಪತಿಗೆ ಪೆಟ್ರೋಲ್​ ಎರಚಿ ಬೆಂಕಿ ಹಚ್ಚಿ ಮನೆಯ ಚಿಲಕ ಹಾಕಿ ಹೊರಗೆ ಓಡಿ ಬಂದಿದ್ದಾಳೆ. ಪರಿಣಾಮ ಆತನ ಶರೀರ ಸಂಪೂರ್ಣ ಸುಟ್ಟು ಕರಕಲಾಗಿದೆ. 

 ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಆರೋಪಿತೆ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕುರಿತು ಮೃತನ ಸಹೋದರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರುಕ್ಮಿಣಿಯನ್ನು ವಿಚಾರಣೆಗೊಳಪಡಿಸಿದ್ದಾರೆ.