-->
ವಾಹನ‌ ಅಡ್ಡಗಟ್ಟಿದ್ದ ದುಷ್ಕರ್ಮಿಗಳ ಗುಂಪು ಪಿಸ್ತೂಲ್ , ಚಾಕು ತೋರಿಸಿ 4.97 ಕೋಟಿ ರೂ. ದರೋಡೆ!

ವಾಹನ‌ ಅಡ್ಡಗಟ್ಟಿದ್ದ ದುಷ್ಕರ್ಮಿಗಳ ಗುಂಪು ಪಿಸ್ತೂಲ್ , ಚಾಕು ತೋರಿಸಿ 4.97 ಕೋಟಿ ರೂ. ದರೋಡೆ!

ಬೆಳಗಾವಿ: ದುಷ್ಕರ್ಮಿಗಳ ಗುಂಪೊಂದು ವಾಹನವೊಂದನ್ನು ಅಡ್ಡಗಟ್ಟಿ ಪಿಸ್ತೂಲ್, ಚಾಕು ತೋರಿಸಿ 4.97 ಕೋಟಿ ರೂ. ದರೋಡೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಬಳಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಎಂಬಲ್ಲಿನ ಲಕ್ಷ್ಮೀ ಗೋಲ್ಡ್ ಮಳಿಗೆ ವ್ಯಾಪಾರಿ ವಿಕಾಸ ವಿಲಾಸ ಕದಂ ಎಂಬುವವರ ಕೋಟ್ಯಂತರ ರೂ. ನಗದು ಕಳೆದುಕೊಂಡಿರುವ ವ್ಯಕ್ತಿ. 

ವಿಕಾಸ ವಿಲಾಸ ಕದಂ ಎಂಬುವವರು ಎ.8ರಂದು ಚಿನ್ನದ ಅಂಗಡಿಯಲ್ಲಿ ವ್ಯವಹಾರ ಮಾಡಿರುವ 4,97,30,000 ರೂ. ನಗದನ್ನು ಕೊಲ್ಲಾಪುರದಿಂದ ಉಡುಪಿಗೆ ತೆಗೆದುಕೊಂಡು ಹೋಗುವವರಿದ್ದರು. ಇದರ ಸಲುವಾಗಿ ರಟ್ಟಿನ ಬಾಕ್ಸ್ ನಲ್ಲಿ 27,30,000 ರೂ. ಹಾಗೂ 5 ಗೋಣಿ ಚೀಲದಲ್ಲಿ 4,70,00,000 ರೂ. ಹಾಕಿ ಪ್ಯಾಕ್ ಮಾಡಿದ್ದರು. ಇಷ್ಟೊಂದು ಮೊತ್ತದ ಹಣವನ್ನು ಬೊಲೆರೋ ಪಿಕಪ್ ಗೂಡ್ಸ್ ವಾಹನದಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಬೆಳಗಾವಿ ಮಾರ್ಗವಾಗಿ ಹಿರೇಬಾಗೇವಾಡಿ ಬಂದಿದ್ದಾರೆ. 

ಅಲ್ಲಿಂದ ಹೆದ್ದಾರಿ ಬಿಟ್ಟು ಬೈಲಹೊಂಗಲ ರಸ್ತೆ ಮಾರ್ಗವಾಅಗಿ ಹೋಗುತ್ತಿದ್ದ ಸಂದರ್ಭ ಹಿರೇಬಾಗೇವಾಡಿಯ ಹಳ್ಳಿ ಮನೆ ದಾಬಾ ಬಳಿ ಎರ್ಟಿಗಾ ಕಾರಿನಲ್ಲಿದ್ದ ಐವರು ದರೋಡೆಕೋರರು ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ಹಣವಿದ್ದದ್ದರಿಂದ ವಾಹನ ಚಾಲಕ ತಪ್ಪಿಸಿಕೊಂಡು ಗದ್ದಿಕರವಿನಕೊಪ್ಪ- ಎಂ.ಕೆ.ಹುಬ್ಬಳ್ಳಿ ರಸ್ತೆ ಮೂಲಕ ಹೋಗಲು ಯತ್ನಿಸಿದ್ದಾನೆ‌. ಈ ಸಂದರ್ಭ ಬೆನ್ನಟ್ಟಿಕೊಂಡು ಬಂದ ದರೋಡೆಕೋರರು ವಾಹನ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. 

ಬಳಿಕ ಬೊಲೆರೋ ವಾಹನದಲ್ಲಿದ್ದ ಚಾಲಕ ಸಚಿನ ಭಾನುದಾಸ ಐಹೊಳೆ, ಮಹಾದೇವ ರಾಮಚಂದ್ರ ಬನಸೋಡೆ ಅವರನ್ನು ಹೊಡೆದು ಪಿಸ್ತೂಲ್, ಚಾಕು ತೋರಿಸಿ 4.97 ಕೋಟಿ ರೂ. ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೈಲಹೊಂಗಲ ಠಾಣೆ ಪಿಐ ಯು.ಎಚ್.ಸಾತೇನಹಳ್ಳಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article