
ಮಂಗಳೂರು: 40% ಕಮಿಷನ್ ಪಡೆಯದಿಲ್ಲವೆಂದು ಈಶ್ವರಪ್ಪನವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಮಾಡಲಿ; ಹಿಂದೂ ಮಹಾಸಭಾ ಸವಾಲು
4/16/2022 05:03:00 AM
ಮಂಗಳೂರು: ಸಚಿವ ಈಶ್ವರಪ್ಪರು ಗುತ್ತಿಗೆದಾರರಲ್ಲಿ 40% ಕಮಿಷನ್ ಪಡೆಯದಿದ್ದಲ್ಲಿ, ಅವರ ಮಂತ್ರಿಮಂಡಲದಲ್ಲಿ ಯಾರೂ ಲಂಚ, ಕಮಿಷನ್ ಪಡೆದಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದ್ದಾರೆ.
ನಗರದಲ್ಲಿನ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರು ಪ್ರಾಮಾಣಿಕರು, ಹಿಂದೂ ಧಾರ್ಮಿಕ ನೀತಿಯನ್ನು ಅನುಸರಿಸುವವರು ಆಗಿದ್ದಲ್ಲಿ ಆ ಸವಾಲನ್ನು ಸ್ವೀಕರಿಸಲಿ. ಧರ್ಮಸ್ಥಳಕ್ಕೆ ನಾವೂ ಬರುತ್ತೇವೆ, ಮಾಧ್ಯಮದವರನ್ನೂ ಕರೆಸುತ್ತೇವೆ. ಅಲ್ಲಿ ಈಶ್ವರಪ್ಪನವರು ಪ್ರಮಾಣ ಮಾಡಿದರೆ ನಿಮ್ಮನ್ನು ಒಪ್ಪಿಕೊಳ್ಳುತ್ತೇವೆ ಎಂದರು.
ಪ್ರಮಾಣ ಮಾಡಿಯೂ ಅವರು ತನಿಖೆಯಲ್ಲಿ ತಪ್ಪಿತಸ್ಥರೆಂದು ಘೋಷಣೆಯಾದಲ್ಲಿ ಎರಡೆರಡು ಧರ್ಮದ್ರೋಹಿಗಳಾಗುತ್ತಾರೆ. ಬಿಜೆಪಿ 40% ಮೂಲಕ ಎಷ್ಟು ಲಂಚ ಪಡೆದಿದೆ ಎಂದು ಆರ್ ಟಿಐ ಮೂಲಕ ಪಡೆಯುತ್ತೇವೆ. ಈವರೆಗೆ ನಡೆದ ಎಲ್ಲಾ ಕಾಮಗಾರಿಗಳು ವರ್ಕ್ ಆರ್ಡರ್ ಮೂಲಕವೇ ನಡೆದಿದೆಯೇ. ಹೆಚ್ಚಿನ ಬಾರಿ ಇಂಜಿನಿಯರ್ ಗಳು ವಿತ್ ಔಟ್ ಆರ್ಡರ್ ಮೂಲಕವೇ ಕಾಮಗಾರಿ ನಡೆಸಿಲ್ಲವೇ ಎಂದು ಧರ್ಮೇಂದ್ರ ಸವಾಲೆಸೆದರು.