ಅವಮಾನಗಳ ನಡುವೆಯೇ 3 ವರ್ಷಗಳ ಕಾಲ ಕೂದಲು ಬೆಳೆಸಿಕೊಂಡ ಬಾಲಕ: ಈತ ಕೂದಲು ಬೆಳೆಸಿಕೊಂಡಿದ್ದೇಕೆ ಗೊತ್ತೇ?

ತ್ರಿಶ್ಶೂರ್​: ಈ ಬಾಲಕನ ಹೆಸರು ಯದು ಕೃಷ್ಣನ್​. 8ನೇ ತರಗತಿ ವಿದ್ಯಾರ್ಥಿಯಾಗಿರುವ ಯದು ಕೃಷ್ಣನ್ ತನ್ನ ಉದ್ದ ಕೂದಲಿನಿಂದಲೇ ಎಲ್ಲರನ್ನೂ ಹುಬ್ಬೇರಿಸಿದ್ದಾನೆ. ಈ ಕೂದಲು ಬೆಳೆಸಿದ ಸಂದರ್ಭ ಆತನನ್ನು ಅನೇಕರು ಹುಡುಗಿ ಎಂದೇ ಭಾವಿಸಿದ್ದರು. ಕಳೆದ ಮೂರು ವರ್ಷಗಳಿಂದ ಯದು ಕೂದಲು ಬೆಳೆಸುತ್ತಿದ್ದು, ಇದರ ಹಿಂದಿನ ಉದ್ದೇಶವನ್ನು ತಿಳಿದರೆ ಯಾರು ಕೂಡಾ ಖಂಡಿತಾ ಯದುವಿಗೆ ಶಹಭಾಸ್​ ಅನ್ನಲೇಬೇಕು. 

ಬಾಲಕ ಯದು ಕೃಷ್ಣನ್, ತ್ರಿಶ್ಶೂರ್​ನ ಮನ್ನುತ್ತಿ ನಿವಾಸಿ ದಂಪತಿಯಾದ ಕಲಾಮಂದಲಂ ಶ್ರೀಜಾ ಆರ್​ ಕೃಷ್ಣನ್​ ಮತ್ತು ಕಲಾಮಂದಲಂ ಸತ್ಯನಾರಾಯಣನ್ ಸುಪುತ್ರ. ತನ್ನ ತಾಯಿಯ ಮೊಬೈಲ್​ನಲ್ಲಿ ಕ್ಯಾನ್ಸರ್​ ರೋಗಿಗಳ ಪರಿಸ್ಥಿತಿಯನ್ನು ನೋಡಿದ್ದ ಮನನೊಂದು ಬಳಿಕ ಕೂದಲು ಬೆಳೆಸುವ ಪ್ರತಿಜ್ಞೆ ಮಾಡಿದ್ದನು. 

ವೀಡಿಯೋ ನೋಡಿದ ಯದು ಕೃಷ್ಣನ್, ತನ್ನ ಕೂದಲನ್ನು ರೋಗಿಗಳಿಗೆ ದಾನ ಮಾಡಬಹುದೇ ಎಂದು ತಾಯಿಯನ್ನು ಕೇಳಿದನು. ಆತನ ನಿರ್ಧಾರದಿಂದ ಹೆಮ್ಮೆ ಪಡುತ್ತಿರುವ ಪಾಲಕರು ಯದುವಿಗೆ ಪೂರ್ಣ ಬೆಂಬಲ ನೀಡುತ್ತಿದ್ದಾರೆ. ಸದ್ಯ ಯದುವಿನ ಕೂದಲು 36 ಸೆಂಟಿಮೀಟರ್​ ಉದ್ದ ಬೆಳೆದಿದೆ. ಮದ್ರಾಸ್​ ಮೆಡಿಕಲ್​ ಮಿಷನ್​ ಆಸ್ಪತ್ರೆಗೆ ಇನ್ನೊಂದು ವಾರದ ಒಳಗೆ ಕೂದಲು ದಾನ ಮಾಡಲು ಯದು ಕೃಷ್ಣನ್ ಮುಂದಾಗಿದ್ದಾನೆ. ನಿಜಕ್ಕೂ ಇದು ಎಲ್ಲರಿಗೂ ಸ್ಫೂರ್ತಿದಾಯಕ. ಯದುವಿನ ದೃಢಸಂಕಲ್ಪ ಮೆಚ್ಚುವಂಥದ್ದು. 

ಆದರೆ, ಯದು ಕೃಷ್ಣನ್ ಕೂದಲು ಬೆಳೆಸಿದ್ದ ವೇಳೆ ಸಾಕಷ್ಟು ಅವಮಾನ ಅನುಭವಿಸಿದ್ದ. ಯದು ಬಟ್ಟೆ ಅಥವಾ ಚಪ್ಪಲಿ ಅಂಗಡಿಗಳಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಆತನಿಗೆ ಹೆಣ್ಣು ಮಕ್ಕಳ ಬಟ್ಟೆ, ಹುಡುಗಿಯರ ಚಪ್ಪಲಿಯನ್ನು ತೋರಿಸಿದ್ದಾರೆ. ಇದಲ್ಲದೆ, ನೋಡಲು ಹುಡುಗಿಯ ತರಹ ಕಾಣುತ್ತಿದ್ದೀಯ ಎಂದು ಶಾಲೆಯಲ್ಲಿ ಆತನ ಸಹಪಾಠಿಗಳು ಅಣುಕಿಸಿದ್ದರಂತೆ. ಅಲ್ಲದೆ, ರೈಲಿನಲ್ಲಿ ಆತನನ್ನು ಒಂಟಿಯಾಗಿ ಬಾತ್​ರೂಮ್​ಗೆ ಕಳುಹಿಸಲು ಹೆದರುತ್ತಿದೆವು ಎಂದು ಯದು ಪಾಲಕರು ತಿಳಿಸಿದ್ದಾರೆ. 

ಶಾಲೆಯಿಂದ ಮನೆಗೆ ಬರುವ ವೇಳೆ ಅನೇಕ ಬಾರಿ ಕಣ್ಣೀರು ಹಾಕುತ್ತಲೇ ಬಂದಿದ್ದಾನೆ. ಆವಾಗಲೆಲ್ಲ ನಾವು ಆತನನ್ನು ಸಮಾಧಾನ ಮಾಡಿ, ಧೈರ್ಯ ತುಂಬಿದೆವು. ಒಮ್ಮೆ ಅವಮಾನವನ್ನು ಸಹಿಸದೇ ಕೂದಲು ಕತ್ತಿರಿಸಿಕೊಳ್ಳಲು ತೀರ್ಮಾನಿಸಿದ್ದ. ಆದರೆ, ನಿರ್ಧಾರ ಬದಲಿಸಿಕೊಳ್ಳುವಂತೆ ನಾವು ತಿಳಿಹೇಳಿದೆವು. ಆತನ ಪ್ರಯತ್ನ ವ್ಯರ್ಥವಾಗಿ ಬಿಡುತ್ತದೆ ಎಂಬ ಚಿಂತೆ ಕಾಡುತ್ತಿತ್ತು. ಆದರೆ, ಈಗ ಎಲ್ಲವೂ ಆತನಿಗೆ ತಿಳಿದಿದೆ. ಆತ ಉತ್ತಮ ಕೆಲಸ ಮಾಡುತ್ತಿರುವುದರ ಬಗ್ಗೆ ಆತನಿಗೆ ತಿಳಿದಿದ್ದೆವು. ನಾವು ಕೂಡ ನಮ್ಮ ಮಗನ ಬಗ್ಗೆ ಹೆಮ್ಮೆ ಪಡುತ್ತೇವೆ ಎನ್ನುತ್ತಾರೆ ಯದು ತಾಯಿ ಶ್ರೀಜಾ.

ಕಳೆದ ಒಂದು ತಿಂಗಳಿಂದ ಯದು ಕೃಷ್ಣನ್ ಶಾಲೆಗೆ ಹಾಜರಾಗಿಲ್ಲ. ಶಾಲೆಗೆ ಬರುವುದಾದರೆ, ಕೂದಲು ಕತ್ತರಿಸಿಕೊಂಡು ಬರಬೇಕೆಂದು ಶಾಲಾ ಪ್ರಾಂಶುಪಾಲರು ಹೇಳಿದ್ದರು. ಆದರೆ, ಆ ಬಳಿಕ ಆತನ ಉದ್ದೇಶ ತಿಳಿದು ಆನ್​ಲೈನ್​ ಕ್ಲಾಸ್​ಗೆ ಹಾಜರಾಗಲು ಶಾಲಾ ಆಡಳಿತ ಮಂಡಳಿ ಅನುಮತಿ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಕೂದಲು ದಾನ ಮಾಡಿದ ಬಳಿಕ ಎಂದಿನಂತೆ ಭೌತಿಕ ತರಗತಿಗೆ ಯದು ಹಾಜರಾಗಲಿದ್ದಾನೆ ಎಂದು ಪಾಲಕರು ಹೇಳಿದ್ದಾರೆ.