ಓರ್ವ ಎಸ್ಎಸ್ಎಲ್ ಸಿ ವಿದ್ಯಾರ್ಥಿಯ ಪರೀಕ್ಷೆಗಾಗಿ 10ಕ್ಕೂ ಅಧಿಕ ಸಿಬ್ಬಂದಿ ಕಾದು ಕುಳಿತಿದ್ದು ಕೊನೆಗೂ ವ್ಯರ್ಥ!

ಕೊಪ್ಪಳ: ಇಲ್ಲಿನ ಎಸ್ಎಸ್ಎಲ್​ಸಿ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆಯಬೇಕಿದ್ದ ಓರ್ವ ವಿದ್ಯಾರ್ಥಿಗಾಗಿ ಸುಮಾರು 10ಕ್ಕೂ ಅಧಿಕ ಸಿಬ್ಬಂದಿ ಕಾದು ಕುಳಿತ ಘಟನೆ ನಡೆದಿದೆ. ಓರ್ವ ಪರೀಕ್ಷಾರ್ಥಿಗಾಗಿ ಇಷ್ಟೆಲ್ಲಾ ಸಿಬ್ಬಂದಿ ಕಾದು ಕುಳಿತಿದ್ದರೂ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗಿ ಯಾವುದೇ ಪ್ರಯೋಜನವಿಲ್ಲದಂತಾಗಿದೆ.

ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿಶೇಷ ಚೇತನ ಮೆಹಬೂಬ್ ಹುಸೇನ್ ಎಂಬ ಓರ್ವನೇ ವಿದ್ಯಾರ್ಥಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲಿದ್ದ. ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯ ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಕೊಠಡಿ ಮೇಲ್ವಿಚಾರಕರು, ಕಚೇರಿ ಸಹಾಯಕರು, ಪರಿಚಾರಕರು, ಇಬ್ಬರು ಆಶಾ ಕಾರ್ಯಕರ್ತೆಯರು, ದೈಹಿಕ ಶಿಕ್ಷಕರು, ಓರ್ವ ಪೊಲೀಸ್ ಸಿಬ್ಬಂದಿ, ಓರ್ವ ಸ್ಥಾನಿಕ ಜಾಗೃತ ದಳದ ಅಧಿಕಾರಿ, 3 ಜನ ಫ್ಲೈಯಿಂಗ್ ಸ್ಕ್ವಾಡ್, ಮೂವರು ಮಾರ್ಗಾಧಿಕಾರಿಗಳು, ಇಬ್ಬರು ಖಜಾನೆ ಅಧಿಕಾರಿಗಳ ಕಾರ್ಯನಿರ್ಹಣೆಗೆ ನಿಯೋಜನೆಗೊಂಡು ಕರ್ತವ್ಯದಲ್ಲಿ ನಿರತವಾಗಿದ್ದರು. 

ಆದರೆ, ಪರೀಕ್ಷೆ ಬರೆಯಬೇಕಿದ್ದ ವಿಶೇಷಚೇತನ ವಿದ್ಯಾರ್ಥಿ ಮೆಹಬೂಬ್ ಹುಸೇನ್ ಪರೀಕ್ಷೆಯ ಸಮಯವಾದರೂ ಬಂದಿರಲಿಲ್ಲ. ಪರಿಣಾಮ ಸಿಬ್ಬಂದಿ ವಿದ್ಯಾರ್ಥಿಗಾಗಿ ಕಾದು ಕುಳಿತಿದ್ದರು. ಆದರೆ ಆ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗಿದ್ದು, ಸಿಬ್ಬಂದಿ ಕಾದು ಕುಳಿತರೂ ಪ್ರಯೋಜನವಾಗಲಿಲ್ಲ.
BREAKING NEWS
Loading latest news...
Join our WhatsApp Channel Powered By : Online Pudu