ಆ್ಯಂಬುಲೆನ್ಸ್ ಚಾಲಕನಿಗೆ 10ಸಾವಿರ ರೂ. ಲಂಚ ಕೊಡಲಾಗದೆ ಬೈಕ್ ನಲ್ಲಿಯೇ ಪುತ್ರನ ಮೃತದೇಹವನ್ನು ಹೊತ್ತೊಯ್ದ ಬಡಪಾಯಿ ತಂದೆ

ತಿರುಪತಿ(ಆಂಧ್ರಪ್ರದೇಶ): ದೇಶದೆಲ್ಲೆಡೆಯೂ ಲಂಚವಿಲ್ಲದಿದ್ದರೆ ಯಾ ಕೆಲಸವೂ ಆಗೋದಿಲ್ಲ. ಸರ್ಕಾರಿ ಇಲಾಖೆಗಳಿಂದ ಹಿಡಿದು ಆಸ್ಪತ್ರೆಗಳವರೆಗೆ ಕೆಲಸ ಆಗಬೇಕಾದರೆ ಲಂಚವಿಲ್ಲದೆ ಆಗೋದೇ ಇಲ್ಲ. ಲಂಚ ನೀಡಿದಲ್ಲಿ ಮಾತ್ರ ಕೆಲಸಗಳು ಆದಷ್ಟು ಶೀಘ್ರ ನಡೆಯುತ್ತವೆ. ಇದಕ್ಕೊಂದು ಮನಕಲಕುವ ನಿದರ್ಶನ ಇಲ್ಲಿದೆ ನೋಡಿ..

ಅನಾರೋಗ್ಯದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ತಿರುಪತಿಯಲ್ಲಿನ ಆರ್​​ಯುಐಎ ಸರ್ಕಾರಿ ಜನರಲ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದ 10 ವರ್ಷದ ಬಾಲಕ ಜೇಸವಾ ಮೃತಪಟ್ಟಿದ್ದ. ಆತನ ಮೃತದೇಹವನ್ನು ಊರಿಗೆ ಕೊಂಡೊಯ್ಯಲು ಆಸ್ಪತ್ರೆಯ ಆ್ಯಂಬುಲೆನ್ಸ್​ ಚಾಲಕ 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಆದರೆ, ಇಷ್ಟೊಂದು ದುಡ್ಡು ನೀಡಲಾಗದ ತಂದೆ ಬಾಲಕನ ಮೃತದೇಹವನ್ನು ಹೊತ್ತುಕೊಂಡು ಬೈಕ್​ನಲ್ಲೇ ಸುಮಾರು 90 ಕಿಲೋ ಮೀಟರ್ ದೂರ ಸಾಗಿದ್ದಾರೆ.


ಪುತ್ರನ ಮೃತದೇಹವನ್ನು ಅಪ್ಪಿಕೊಂಡು ಬೈಕ್​ ಹಿಂಬದಿಯಲ್ಲಿ ಕುಳಿತುಕೊಂಡು ಸಾಗುತ್ತಿರುವ ವೀಡಿಯೋ ತುಣುಕನ್ನು ಆಂಧ್ರಪ್ರದೇಶದ ಪ್ರತಿಪಕ್ಷದ ನಾಯಕ ಎನ್​.ಚಂದ್ರಬಾಬು ನಾಯ್ಡು ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ತಿರುಪತಿಯ ಆರ್​ಯುಐಎ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಮಗು ಜೇಸವಾನಿಗೋಸ್ಕರ ನನ್ನ ಹೃದಯ ಕಲಕಿದೆ. ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡುವಂತೆ ತಿಳಿಸಿದ್ರೂ ಅದು ಸಾಧ್ಯವಾಗಿಲ್ಲ. ಬಡತನದಿಂದ ಕಂಗೆಟ್ಟ ತಂದೆಗೆ ಬೇರೆ ದಾರಿಯಿಲ್ಲದೆ ಆ ಮಗುವನ್ನು ಬೈಕ್ ನಲ್ಲಿಯೇ ಸಾಗಿರುವುದು ನಿಜಕ್ಕೂ ಆಂಧ್ರಪ್ರದೇಶದ ಆಸ್ಪತ್ರೆಗಳಲ್ಲಿನ ಆರೋಗ್ಯ ಮೂಲಸೌಕರ್ಯಗಳ ದುಸ್ಥಿತಿಯನ್ನು ಪ್ರಶ್ನಿಸುವಂತಿದೆ" ಎಂದು ಚಂದ್ರಬಾಬು ನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ.