ಯೂಟ್ಯೂಬ್‌ನಲ್ಲಿ ಕೋಮುವಾದಿ ಪ್ರಚಾರ ಮಾಡುತ್ತಿದ್ದ ದುಷ್ಕರ್ಮಿ ಸೆರೆ
ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಧರ್ಮ ದ್ವೇಷದ ಭಾಷಣ ಹರಿಯಬಿಟ್ಟು, ಕೋಮುವಾದದ ಪ್ರಚಾರ ಮಾಡುತ್ತಿದ್ದ ದುಷ್ಕರ್ಮಿಯನ್ನು ಬಂಧಿಸಲಾಗಿದೆ.
ಕಣಿಯಂಕುಲಂನ ನೆಯ್ಯಟ್ಟಿಂಕರ ನಿವಾಸಿ ಬಾದುಶಾ ಜಮಾಲ್ (32) ಬಂಧಿತ ಆರೋಪಿ. ಈತನನ್ನು ಬಂಧಿಸಿದ ಪೊಲೀಸರು ಆತನ ವಶದಲ್ಲಿ ಕಂಪ್ಯೂಟರ್ ನ್ನು ಸೀಜ್ ಮಾಡಿದ್ದಾರೆ.
ಬಂಧಿತ ಆರೋಪಿ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಸಮಾಜದಲ್ಲಿ ಕೋಮುವಾದಿ ಪ್ರಚಾರ ಮಾಡುವ ಹಲವು ವೀಡಿಯೊಗಳನ್ನು ನಿರಂತರವಾಗಿ ಪ್ರಸಾರ ಮಾಡಿದ್ದ ಎಂದು ಪೊಲೀಸರು ತಮ್ಮ FIRನಲ್ಲಿ ದಾಖಲಿಸಿದ್ದಾರೆ.
ಡೆಮಾಕ್ರಸಿ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಸಮಾಜದಲ್ಲಿ ಕೋಮುವಾದ ಬೆಳೆಸುವ ರೀತಿಯಲ್ಲಿ ಈತ ಸುಳ್ಳು ಸುದ್ದಿಗಳನ್ನು, ವದಂತಿಗಳನ್ನು ಸುದ್ದಿ ರೂಪದಲ್ಲಿ ಪ್ರಸಾರ ಮಾಡುತ್ತಿದ್ದ. ಕೆಲವೊಂದು ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿ, ಈ ಪ್ರಕರಣದ ಆರೋಪಿಗಳು ನಿರ್ದಿಷ್ಟ ಧರ್ಮಕ್ಕೆ ಸೇರಿದ ಕಾರಣ ಬಂಧನ ವಿಳಂಬವಾಗಿದೆ ಎಂದು ಕತೆ ಕಟ್ಟಿ, ಪೊಲೀಸರ ವಿರುದ್ಧ ಧರ್ಮ ದ್ವೇಷದ ಆರೋಪ ಮಾಡಿದ್ದ.
