
ಕುಡಿಯಲು ಹಣ ನೀಡಿಲ್ಲವೆಂದು ಪತ್ನಿಯನ್ನೇ ಬೆಂಕಿ ಹಚ್ಚಿ ಕೊಲೆಗೆತ್ನಿಸಿದ ಪಾಪಿ ಪತಿ
Friday, March 11, 2022
ಬೆಂಗಳೂರು: ಮೂರು ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಪಾಪಿ ಪತಿಯೋರ್ವನು ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈಯಲು ಯತ್ನಿಸಿರುವ ಘಟನೆ ರಾಜ್ಯದ ರಾಜಧಾನಿಯಲ್ಲಿ ನಡೆದಿದೆ.
ಕಾಕ್ಸ್‌ಟೌನ್ ದೊಡ್ಡಗುಂಟೆ ನಿವಾಸಿ ಮೀನಾಗೆ (23) ಗಾಯಗೊಂಡ ಯುವತಿ. ಆಕೆಯ ಪತಿ ಬಾಬು ಎಂಬಾತ ಬೆಂಕಿ ಹಚ್ಚಿದಾತ
ಮೀನಾ ಏಳು ವರ್ಷಗಳ ಹಿಂದೆ ವಿಜಯ್ ಕಾಂತ್ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ ದುರಾದೃಷ್ಟವಶಾತ್ ಮೂರು ವರ್ಷಗಳ ಹಿಂದೆ ವಿಜಯ್ ಕಾಂತ್ ಮೃತಪಟ್ಟಿದ್ದರು. ಈ ಸಂದರ್ಭ ಪಕ್ಕದ ನಿವಾಸಿಯಾಗಿದ್ದ ಬಾಬು ಎಂಬಾತ ಮೀನಾರನ್ನು ಮದುವೆಯಾಗುವುದಾಗಿ ಹೇಳಿದ್ದ. ಇದಕ್ಕೆ ಒಪ್ಪಿಗೆ ನೀಡಿದ್ದ ಮೀನಾ, ಏಳು ತಿಂಗಳ ಹಿಂದೆ ಬಾಬುವಿನೊಂದಿಗೆ ಮದುವೆಯಾಗಿ ಬೈಯಪ್ಪನಹಳ್ಳಿಯ ಪುಟ್ಟಪ್ಪ ಬಿಲ್ಡಿಂಗ್ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಬಾಬು ಕೂಲಿ ಕೆಲಸ ಮಾಡುತ್ತಿದ್ದರೆ, ಮೀನಾ ಸಣ್ಣ-ಪುಟ್ಟ ಮನೆ ಕೆಲಸ ಮಾಡುತ್ತಿದ್ದಳು. ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಇದ್ದರು. ಆದರೆ ಕ್ರಮೇಣ ಬಾಬುವಿನ ಕುಡಿತ ಹೆಚ್ಚಾಗುತ್ತಾ ಹೋಯಿತು. ಪ್ರತಿ ದಿನ ಕುಡಿದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅಲ್ಲದೇ, ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದ.
ಪತಿಯ ಕಿರುಕುಳದಿಂದ ರೋಸಿ ಹೋಗಿದ್ದ ಮೀನಾ, ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತಿಯನ್ನು ಬೆದರಿಕೆಯೊಡ್ಡಿದ್ದರು. ಇದರಿಂದ ಅಕ್ರೋಶಗೊಂಡ ಬಾಬು, ನೀನ್ಯಾಕೆ ಸಾಯುತ್ತೀಯ?, ನಾನೇ ಸಾಯಿಸುವೆ ಎಂದು ಡೀಸೆಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ.
ತಕ್ಷಣ ಸ್ಥಳೀಯರು ಮೀನಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.