ಅಪ್ರಾಪ್ತ ಸಹೋದರಿಯರ ಮೃತದೇಹ ಬಾವಿಯಲ್ಲಿ ಪತ್ತೆ: ಸಾವಿನ ಕೂಲಂಕಷ ತನಿಖೆಗೆ ಶಾಸಕರಿಂದ ಎಸ್ಪಿಗೆ ಆದೇಶ

ಬೀದರ್: ಬೆಳ್ಳಂಬೆಳಗ್ಗೆ ಅಪ್ರಾಪ್ತ ಸಹೋದರಿಯರಿಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಭಾಲ್ಕಿ ತಾಲೂಕಿನ ಗಡಿ ಅಟರ್ಗಾ ಗ್ರಾಮದಲ್ಲಿ ನಡೆದಿದೆ. ಬಾಲಕಿಯರ ಮೃತದೇಹವನ್ನು ನೋಡಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಅಟರ್ಗಾ ಗ್ರಾಮದ ಗೋವಿಂದರಾವ್​ ಮೊರೆಯವರ ಮಕ್ಕಳಾದ ಅಂಕಿತಾ(15) ಮತ್ತು ಶ್ರದ್ಧಾ(10) ಮೃತಪಟ್ಟ ಸಹೋದರಿಯರು.

ಇಂದು ಬೆಳ್ಳಂಬೆಳಗ್ಗೆ ಸಹೋದರಿಯರಿಬ್ಬರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ, ಕೊಲೆಯೋ, ಆಕಸ್ಮಿಕ ಸಾವೋ ಇನ್ನೂ ತಿಳಿದು ಬಂದಿಲ್ಲ. ಮಕ್ಕಳಿಬ್ಬರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಪೋಷಕರು ಮೆಹಕರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಶಾಸಕ ಈಶ್ವರ ಖಂಡ್ರೆ ಸಹೋದರಿಯರ ಹೆತ್ತವರಿಗೆ ಸಾಂತ್ವನ ಸೂಚಿಸಿದ್ದಾರೆ.  ಸಹೋದರಿಯರಾದ ಶ್ರದ್ಧಾ ಮತ್ತು ಅಂಕಿತಾ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುವೆ ಎಂದಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಾವಿನ ಹಿಂದೆ ಯಾರ ಕೈವಾಡವಿದ್ದರೂ ಕೂಲಂಕುಷವಾಗಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೀದರ್ ಎಸ್ಪಿ ಕಿಶೋರ್​ ಬಾಬು ಅವರಿಗೆ ಶಾಸಕರು ಸೂಚಿಸಿದ್ದಾರೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.