-->
ಕೋಟಿಗಟ್ಟಲೆ ರೂ. ಹಣ, ಕೆಜಿಗಟ್ಟಲೆ ಬಂಗಾರವನ್ನು ದರೋಡೆಗೈದ ಬ್ಯಾಂಕ್ ಕ್ಲರ್ಕ್ ಸೇರಿದಂತೆ ಮೂವರು ಅಂದರ್

ಕೋಟಿಗಟ್ಟಲೆ ರೂ. ಹಣ, ಕೆಜಿಗಟ್ಟಲೆ ಬಂಗಾರವನ್ನು ದರೋಡೆಗೈದ ಬ್ಯಾಂಕ್ ಕ್ಲರ್ಕ್ ಸೇರಿದಂತೆ ಮೂವರು ಅಂದರ್

ಬೆಳಗಾವಿ: ಬ್ಯಾಂಕ್​ ನಿಂದ ಕೋಟಿಗಟ್ಟಲೆ ರೂ. ನಗದು, ಕೆ.ಜಿ.ಗಟ್ಟಲೆ ಚಿನ್ನ ದರೋಡೆಯಾದ ಮೂವರು ಆರೋಪಿಗಳನ್ನು ಘಟನೆ ನಡೆದ ವಾರದೊಳಗೆ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. 

ಈ ಮೂಲಕ ಸವದತ್ತಿ ತಾಲೂಕಿನ ಮುರಗೋಡ ಡಿಸಿಸಿ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಒಂದೇ ವಾರದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, 4.20 ಕೋಟಿ ರೂ. ನಗದು, 3 ಕೆಜಿ ಬಂಗಾರ ಆಭರಣಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಹಾಗೂ ಮುರಗೋಡ ಡಿಸಿಸಿ ಬ್ಯಾಂಕ್ ಕ್ಲರ್ಕ್ ಬಸವರಾಜ ಹುಣಶಿಕಟ್ಟಿ (30), ಯರಗಟ್ಟಿ ಗ್ರಾಮದ ಸಂತೋಷ ಕಾಳಪ್ಪ ಕಂಬಾರ (31), ಸವದತ್ತಿ ತಾಲೂಕಿನ ಜೀವಾಪುರ ಗ್ರಾಮದ ಗಿರೀಶ ಲಕ್ಷ್ಮಣ ಬೆಳವಲ (26) ಬಂಧಿತ ಆರೋಪಿಗಳು. 

ಮುರಗೋಡ ಡಿಸಿಸಿ ಬ್ಯಾಂಕ್ ಸ್ಟ್ರಾಂಗ್ ರೂಂ ಹಾಗೂ ಲಾಕರ್‌ಗಳ ನಕಲಿ ಕೀಗಳನ್ನು ಬಳಸಿ 4,37,59,000 ರೂ. ನಗದು ಹಾಗೂ 3 ಕೆ.ಜಿ. ಚಿನ್ನಾಭರಣ (1,63,72,220 ರೂ. ಮೌಲ್ಯ) ಕಳವಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ಪ್ರಮೋದ ಯಲಿಗಾರ ಮಾ.6ರಂದು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾ.6ರಂದು ಜಿಲ್ಲಾ ಎಸ್ಪಿ ಮಹಾನಿಂಗ ನಂದಗಾಂವಿ, ಡಿಎಸ್‌ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ಪ್ರಕರಣದ ಬೆನ್ನುಬಿದ್ದ ಪೊಲೀಸ್ ತನಿಖಾ ತಂಡ ಆರಂಭದಲ್ಲಿ ಬ್ಯಾಂಕ್ ನ ಎಲ್ಲಾ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡಿತ್ತು. 

ಈ ಸಂದರ್ಭ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದ ಬ್ಯಾಂಕ್ ಕ್ಲರ್ಕ್ ಬಸವರಾಜ ಹುಣಶಿಕಟ್ಟಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆಗ  ಬಸವರಾಜ ಹುಣಶಿಕಟ್ಟಿ ಸೇರಿದಂತೆ ಮತ್ತಿಬ್ಬರು ಆರೋಪಿಗಳು ಸೇರಿಕೊಂಡು ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ಕಳವು ಮಾಡಿರುವ ನಗದು ಹಾಗೂ ಬಂಗಾರದ ಆಭರಣಗಳನ್ನು ಜಮೀನಿನಲ್ಲಿ ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಇದೀಗ ಕದ್ದ ಮಾಲನ್ನು ವಶಕ್ಕೆ ಪಡೆದಿರುವ ಪೊಲೀಸರು ಅದನ್ನು ಬ್ಯಾಂಕ್‌ಗೆ ಒಪ್ಪಿಸಿದ್ದಾರೆ.

ಐಷಾರಾಮಿ ಜೀವನ ನಡೆಸಬೇಕೆಂಬ ಬಯಕೆಯಿಂದ ಡಿಸಿಸಿ ಬ್ಯಾಂಕ್ ಕ್ಲರ್ಕ್ ಬಸವರಾಜ ಹುಣಶಿಕಟ್ಟಿ, ಸಂತೋಷ ಕಾಳಪ್ಪ ಕಂಬಾರ, ಗಿರೀಶ ಲಕ್ಷ್ಮಣ ಬೆಳವಲ ಈ ಮೂವರು ಸೇರಿಕೊಂಡು ಡಿಸಿಸಿ ಬ್ಯಾಂಕ್ ದರೋಡೆಗೆ ನಾಲ್ಕೈದು ತಿಂಗಳುಗಳಿಂದ ಸ್ಕೆಚ್ ಹಾಕಿದ್ದರು. ಅದರಂತೆ ನಕಲಿ ಕೀಗಳನ್ನು ಬಳಸಿ ಕಳವು ಗೈದಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಲಾಗಿದ್ದು, ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಕುರಿತು ಮಾಹಿತಿ ಸಂಗ್ರಹಿಸಿಕೊಳ್ಳಲಾಗುತ್ತಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article