ಮಂಗಳೂರು ತಲುಪಿದ ಉಕ್ರೇನ್ ನಿಂದ ಏರ್ ಲಿಫ್ಟ್ ಆದ ದ.ಕ.ಜಿಲ್ಲೆಯ ಮೊದಲ ವಿದ್ಯಾರ್ಥಿನಿ ಅನುಷಾ ಭಟ್ !

ಮಂಗಳೂರು: ಉಕ್ರೇನ್ ನಿಂದ ಏರ್ ಲಿಫ್ಟ್ ಆದ ದ.ಕ.ಜಿಲ್ಲೆಯ ಮೊದಲ ವಿದ್ಯಾರ್ಥಿನಿ ಅನುಷಾ ಭಟ್ ಮಂಗಳೂರು ವಿಮಾನ ನಿಲ್ದಾಣವನ್ನು ಇಂದು ತಲುಪಿದರು. ಅವರನ್ನು ಪೋಷಕರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಬಿಜೆಪಿ ಮುಖಂಡರು ಸಂಭ್ರಮದಿಂದ  ಸ್ವಾಗತಿಸಿದರು.

ಮಂಗಳೂರಿನ ಬಿಜೈ ನ್ಯೂ ರೋಡ್ ನಿವಾಸಿ ಅನುಷಾ ಭಟ್  ರೊಮೇನಿಯಾದಿಂದ ಮುಂಬೈಗೆ ಆಗಮಿಸಿ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ‌. ಇವರು ಉಕ್ರೇನ್ ನ ವಿನ್ನೆಸ್ಟ್ಯಿಯಾ ನಗರದ ನ್ಯಾಷನಲ್ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪಡಿಯುತ್ತಿದ್ದರು‌. ಅನುಷಾ ಭಟ್‌ ಯುದ್ಧವಾಗುತ್ತಿದ್ದ ಪ್ರದೇಶದಿಂದ ಸುಮಾರು 200 ಕಿ.ಮೀ. ದೂರದಲ್ಲಿದ್ದರು. ಮಂಗಳೂರಿಗೆ ಬಂದ ಪುತ್ರಿಯನ್ನು ಕಂಡು ಪೋಷಕರು ಸಂತಸಪಟ್ಟರು‌. ಅಲ್ಲದೆ ಪುತ್ರಿಯನ್ನು ಏರ್ ಲಿಫ್ಟ್ ಮಾಡಿ ಮಂಗಳೂರಿಗೆ ಸುರಕ್ಷಿತವಾಗಿ ಕರೆ ತಂದಿರುವುದಕ್ಕೆ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು.



ಮಂಗಳೂರು ವಿಮಾನ ನಿಲ್ದಾಣದಲ್ಲಿ  ಅನುಷಾ ಭಟ್ ಮಾತನಾಡಿ, ಏಜೆಂಟ್ ಒಬ್ಬರ ಸಹಾಯದಿಂದ ಬಸ್ ಬುಕ್ ಮಾಡಿ ಫೆ.26ಕ್ಕೆ  ಉಕ್ರೇನ್ ಬಾರ್ಡರ್ ಗೆ ಬಳಿಗೆ ಬಂದಿದ್ದೆವು. ಅಲ್ಲಿಂದ 2ಕಿ.ಮೀ. ನಡೆದುಕೊಂಡು ಬಂದು ಫೆ.27ರಂದು ಬೆಳಗ್ಗೆ ನಾವು ಬಾರ್ಡರ್ ತಲುಪಿದ್ದೇವೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ಗೊಂದಲಕ್ಕೊಳಗಾಗಿದ್ದೆವು. ಅಲ್ಲದೆ ನಮಗೆ ಸ್ಟೆಪ್ 1 ಪರೀಕ್ಷೆಯಿದ್ದ ಕಾರಣ ನಮಗೆ ತಾಯ್ನಾಡಿಗೆ ಹೊರಡುವ ಬಗ್ಗೆ ಏನು ಮಾಡಬೇಕೆಂದು ಗೊತ್ತಾಗಿಲ್ಲ ಎಂದು ಹೇಳಿದರು.

ನಾವಿರುವ ಕಡೆಯಲ್ಲಿ ಯಾವುದೇ ಯುದ್ಧದ ಪರಿಸ್ಥಿತಿ ಇರಲಿಲ್ಲ. ಮನೆಯವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೆ. ಕರೆ ಮಾಡುವುದಕ್ಕೆ ಯಾವುದೇ ತೊಡಕಾಗಿರಲಿಲ್ಲ. ಬುಕರೆಸ್ಟ್ ನಿಂದ ಮಂಗಳೂರು ತಲುಪುವವರೆಗೆ ಭಾರತ ಸರ್ಕಾರ‌ ನಮಗೆ ಬಹಳ ಸಹಕಾರ ಮಾಡಿದೆ.‌ ನಾನು ಮಂಗಳೂರಿಗೆ ಬಂದು ತಲುಪುವವರೆಗೂ ಸರಕಾರದ ಪ್ರತಿನಿಧಿಗಳು ನಿರಂತರ ಸಂಪರ್ಕದಲ್ಲಿದ್ದರು. ಬುಕರೆಸ್ಟ್ ನಿಂದ ಹೊರಟ ಫ್ಲೈಟ್ ನಲ್ಲಿ ಭಾರತೀಯರೇ ಇದ್ದರು. ಎಲ್ಲರೂ ಸೇಫಾಗಿ ಬಂದು ತಲುಪಿದ್ದಾರೆ.‌ ನನ್ನ ಕಾಲೇಜಿನಲ್ಲಿ ಒಬ್ಬಳು ವಿದ್ಯಾರ್ಥಿನಿ ಮಂಗಳೂರಿನಲ್ಲಿದ್ದಳು‌. ಅವಳು ಇನ್ನಷ್ಟೇ ಏರ್ ಲಿಫ್ಟ್ ಆಗಬೇಕು ಎಂದು ಅನುಷಾ ಭಟ್ ಹೇಳಿದರು.
BREAKING NEWS
Loading latest news...
Join our WhatsApp Channel Powered By : Online Pudu