
ಗೆಲುವಿನ ಸರದಾರ 'ಲವ್ಲೀಬಾಯ್ ಟಗರು' ಹೃದಯಾಘಾತದಿಂದ ಮೃತ್ಯು: 8ಲಕ್ಷ ರೂ. ಕೊಟ್ಟರೂ ಮಾರಾಟ ಮಾಡದ ಟಗರು ಇನ್ನು ನೆನಪು ಮಾತ್ರ
3/01/2022 07:39:00 PM
ಬಾಗಲಕೋಟೆ: ಗೆಲುವಿನ ಸರದಾರ 'ಲವ್ಲಿಬಾಯ್' ಎಂದೇ ಖ್ಯಾತಿಗೊಂಡಿದ್ದ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ಟಗರು ಹೃದಯಾಘಾತದಿಂದ ಮೃತಪಟ್ಟಿದೆ. ಕಾಳಗಕ್ಕೆ ಹೆಸರುವಾಸಿಯಾಗಿದ್ದ, ಮುನ್ನೂರಕ್ಕೂ ಅಧಿಕ ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಲವ್ಲಿಬಾಯ್ ಟಗರು ಮೃತಪಟ್ಟಿದೆ.
ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದ ನಾಟಕಕಾರ ಎಚ್.ಎನ್. ಸೇಬಣ್ಣ ಎಂಬವರ ಮನೆಯಲ್ಲಿ ಸಾಕಿದ್ದ ಲವ್ಲಿಬಾಯ್ ಟಗರುವಿನ ಸಾಧನೆ ಅಪಾರ. ಈ ಟಗರುವಿಗೆ 8 ಲಕ್ಷ ರೂ. ಕೊಡ್ತೇವೆ ಕೊಡಿ ಅಂದ್ರೂ ಸೇಬಣ್ಣ ಮಾರಾಟ ಮಾಡಿರಲಿಲ್ಲ. ಈ ಟಗರು ಮೇಲೆ ಅವರಿಗೆ ಅಂತಹ ಪ್ರೀತಿಯಿತ್ತು. ಮುನ್ನೂರಕ್ಕೂ ಅಧಿಕ ಟಗರುಗಳಿಗೆ ಡಿಚ್ಚಿ ಹೊಡೆದು ಸೋಲಿಸಿದ್ದ ಈ ಲವ್ಲಿಬಾಯ್ ಟಗರು ಚಿನ್ನ, ಬೆಳ್ಳಿ, ಬೈಕ್, ಹೋರಿ ಸೇರಿದಂತೆ ಲಕ್ಷಾಂತರ ರೂ. ಬಹುಮಾನ ಗಳಿಸಿತ್ತು.
ತನ್ನ 6 ವರ್ಷ ವಯಸ್ಸಿಗೇ ಲವ್ಲಿಬಾಯ್ ಟಗರು ನಿನ್ನೆ ತನ್ನ ಬದುಕಿನ ಪಯಣ ಮುಗಿಸಿದೆ. ಇದು ಸೇಬಣ್ಣವರ ಕುಟುಂಬಕ್ಕೆ ತೀವ್ರ ಆಘಾತ ನೀಡಿದೆ. ಗ್ರಾಮಸ್ಥರೂ ಟಗರಿನ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ. ಟಗರಿನ ಮೃತದೇಹಕ್ಕೆ ಹೂವಿನ ಮಾಲೆ, ಹಣೆಗೆ ಬೆಳ್ಳಿ ಖಡಗ, ದೇಹಕ್ಕೆ ಭಂಡಾರ ಬಳಿದು ಪ್ರಶಸ್ತಿಗಳನ್ನು ಪಾರ್ಥೀವ ಶರೀರದ ಮುಂದೆ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿ, ಅಂತಿಮ ದರ್ಶನ ಪಡೆಯಲು ಟಗರು ಅಭಿಮಾನಿಗಳಿಗೆ ವ್ಯವಸ್ಥೆ ಮಾಡಲಾಗಿದೆ.