-->
ಮಕ್ಕಳಿಲ್ಲದ ದಂಪತಿಯೇ ಇವರ ಟಾರ್ಗೆಟ್: 70ಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿದ ಖತರ್​ನಾಕ್​ ಸತಿ-ಪತಿ ಬಂಧನ!

ಮಕ್ಕಳಿಲ್ಲದ ದಂಪತಿಯೇ ಇವರ ಟಾರ್ಗೆಟ್: 70ಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿದ ಖತರ್​ನಾಕ್​ ಸತಿ-ಪತಿ ಬಂಧನ!

ತುಮಕೂರು: ಮಕ್ಕಳಿಲ್ಲದ ದಂಪತಿಯನ್ನೇ ಟಾರ್ಗೆಟ್​ ಮಾಡಿ ವಂಚಿಸುತ್ತಿದ್ದ ಖತರ್​​ನಾಕ್​ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ 70ಕ್ಕೂ ಅಧಿಕ ಮಂದಿಗೆ ಮೋಸ ಮಾಡಿದ ಜೋಡಿಯೀಗ ಕಂಬಿ ಎಣಿಸುತ್ತಿದೆ.

ಇವರ ಮಾತು ಕೇಳಿ ಮೋಸ ಹೋದವರು ದುಡ್ಡು ಕಳೆದುಕೊಂಡಿದ್ದಷ್ಟೇ ಅಲ್ಲದೆ, ಕೆಲವರು ಆರೋಗ್ಯವನ್ನೂ ಕಳೆದುಕೊಂಡು ಇನ್ನೂ ಚೇತರಿಸಿಕೊಳ್ಳಲಾಗದೆ ಸಂಕಟ ಪಡುತ್ತಿದ್ದಾರೆ. ತಮ್ಮನ್ನು ವೈದ್ಯರೆಂದು ಹೇಳಿಕೊಂಡು ಮೋಸ ಮಾಡುತ್ತಿದ್ದ ಖತರ್​​ನಾಕ್ ದಂಪತಿ ಜೋಡಿ ವಾಣಿ ಮತ್ತು ಮಂಜುನಾಥನನ್ನು ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸರು ಬಂಧಿಸಿದ್ದಾರೆ.

ಈ ದಂಪತಿ ತಮ್ಮ ಕಾರಿಗೆ ವೈದ್ಯರ ಲೋಗೋ ಹಾಕಿಕೊಂಡು, ಸ್ಟೆತಾಸ್ಕೋಪ್​ ಹಿಡಿದುಕೊಂಡು ವೈದ್ಯರ​ ಥರಹ ಪೋಸ್​ ಕೊಡುತ್ತಿದ್ದರು. ವಾಣಿ ಮಕ್ಕಳಿಲ್ಲದ ದಂಪತಿಯನ್ನೇ ಟಾರ್ಗೆಟ್ ಮಾಡಿ ತಾವು ಕೊಟ್ಟ ಮದ್ದು ಪಡೆದು ಹೇಳಿದಂತೆಯೇ ಮಾಡಿದರೆ ಮಕ್ಕಳಾಗುತ್ತದೆ ಎಂದು ಹಣ ಪಡೆದು ವಂಚಿಸಿದ್ದಾರೆ. ಒಬ್ಬೊಬ್ಬರಿಗೆ 2ರಿಂದ 5 ಲಕ್ಷ ರೂ. ವರೆಗಿನ ಇಂಜೆಕ್ಷನ್, ಪೌಡರ್ ಇತ್ಯಾದಿಯನ್ನು ಪ್ಯಾಕೇಜ್​ ರೂಪದಲ್ಲಿ ಕೊಡುತ್ತಿದ್ದರು. ಬಳಿಕ ಒಂದಷ್ಟು ಸೂಚನೆಗಳನ್ನು ನೀಡಿ ಯಾವುದೇ ಸ್ಕ್ಯಾನ್ ಮಾಡಿಸಬಾರದು ಎಂದು ತಾಕೀತು ಮಾಡುತ್ತಾರೆ. ಈ ಖತರ್ನಾಕ್ ಜೋಡಿಯಿಂದ ಮೋಸ ಹೋಗಿ ಹಣ-ಆರೋಗ್ಯ ಎರಡೂ ಕಳೆದುಕೊಂಡವರು ಕೊಟ್ಟ ದೂರಿನನ್ವಯ ಪೊಲೀಸರು ಇವರನ್ನು ಬಂಧಿಸಿದ್ದಾರೆ. 

ಆರು ತಿಂಗಳುಗಳಿಂದ  ಆರೋಪಿಗಳು ಚಿಕಿತ್ಸೆ ನೀಡುತ್ತಿದ್ದರು. ಅನುಮಾನದ ಹಿನ್ನೆಲೆ ದಂಪತಿಯೊಂದು ಇವರ ಮೇಲೆ ಪೊಲೀಸ್ ದೂರು ನೀಡಿದ್ದರು. ತಿಪಟೂರು ತಾಲೂಕಿನ‌‌ ಬೆಳಗರಹಳ್ಳಿಯ ಒಂದೇ ಗ್ರಾಮದ 5-6 ಮಹಿಳೆಯರಿಗೆ ವಂಚನೆ ಮಾಡಿರುವ ಈ ಜೋಡಿ ಪ್ರತಿಯೊಬ್ಬರಿಂದಲೂ 2-5 ಲಕ್ಷ ರೂ. ಪಡೆದಿದ್ದರು. ಅದರಲ್ಲೂ ಈಕೆಯಿಂದ ಇಂಜೆಕ್ಷನ್ ಪಡೆದ ಮಹಿಳೆಯೊಬ್ಬರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದೆ. ಇವರಿಂದ ಔಷಧಿ ಎಂದು ಪಡೆದಿರುವ ವಸ್ತುವಿ‌ನಿಂದ ಎರಡೇ ತಿಂಗಳಲ್ಲಿ ಮಹಿಳೆಯರ ದೇಹದಲ್ಲಿ ಬದಲಾವಣೆ ಕಾಣಿಸುತ್ತಿದ್ದು, ಇಂಜೆಕ್ಷನ್ ಪಡೆದ ಕೆಲ ತಿಂಗಳಲ್ಲಿ ಮಹಿಳೆಯೊಬ್ಬರು ಸಾವು-ಬದುಕಿನ ನಡುವೆ ಹೋರಾಡುವಂತಾಗಿದೆ. 

ಕಿಡ್ನಿ ಸಮಸ್ಯೆ, ಮೆದುಳು ಸಮಸ್ಯೆ ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಈ ಮಹಿಳೆ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 10 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಿದ್ದರೂ ಆಕೆಯ ಪರಿಸ್ಥಿತಿ ಗಂಭೀರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯೆಯೆಂದು ಹೇಳುತ್ತಿರುವ ವಾಣಿಯನ್ನು ಸಂಪರ್ಕಿಸಿದಾಗ ಸಬೂಬು ಹೇಳಿ ತಪ್ಪಿಸಿಕೊಂಡಿದ್ದರು. ಇವರು ಕೂಡ ಪೊಲೀಸರಿಗೆ ದೂರು ನೀಡಿದ್ದರು. 

ಈ ರೀತಿಯಲ್ಲಿ ಬರುತ್ತಿರುವ ದೂರುಗಳ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಸಕಲೇಶಪುರದಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಗಳಿಂದ 10 ಲಕ್ಷ ರೂ. ನಗದು ಹಾಗೂ 250 ಗ್ರಾಂ ಚಿನ್ನಾಭರಣ ಕೂಡ ವಶಪಡಿಸಿಕೊಳ್ಳಲಾಗಿದೆ. ಡಾಕ್ಟರ್ ಲೋಗೋ ಹಾಕಿಕೊಂಡು ‌ವಂಚಿಸುತ್ತಿದ್ದ ಮಹೀಂದ್ರಾ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ತಿಪಟೂರು ತಾಲೂಕಿನಲ್ಲೊಂದರಲ್ಲೇ ಬರೋಬ್ಬರಿ 70 ದಂಪತಿಗಳಿಗೆ ಇದೇ ರೀತಿ ವಂಚಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಮೋಸ ಹೋದ ದಂಪತಿಗಳು ಮರ್ಯಾದೆಗೆ ಅಂಜಿ ದೂರು ಕೊಡಲು ಹಿಂದೇಟು ಹಾಕಿರುವುದು ಕಂಡುಬಂದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಮತ್ತಷ್ಟು ವಿಷಯ ಹೊರಬರಬಹುದು ಎನ್ನಲಾಗುತ್ತದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay RS 100

  

Advertise under the article