ಐಎಎಸ್ ಅಧಿಕಾರಿ ಹೆಸರಿನಲ್ಲಿ 3ಲಕ್ಷ ರೂ. ಸೈಬರ್ ವಂಚನೆ : ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕರಿಂದ ದೂರು ದಾಖಲು

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಹೆಸರು ಹೇಳಿಕೊಂಡು ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕರಿಗೆ ಸೈಬರ್ ಖದೀಮರು 3 ಲಕ್ಷ ರೂ. ವಂಚನೆ ಮಾಡಿದ್ದಾರೆ.

ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕ ಎನ್.ಆರ್. ವ್ಯಾಸರಾಜ್ ಪೂರ್ವ ವಿಭಾಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮಾರ್ಚ್ 3ರಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೆಸರಿನಲ್ಲಿ ಅಪರಿಚಿತನೋರ್ವನು ವ್ಯಾಸರಾಜ್‌ಗೆ ಈಮೇಲ್ ಮಾಡಿದ್ದಾನೆ. ಅದರಲ್ಲಿ ಆತ ವಾಟ್ಸ್‌ಆ್ಯಪ್ ಇರುವ ಮೊಬೈಲ್​ಫೋನ್​ ನಂಬರ್ ಶೇರ್ ಮಾಡುವಂತೆ ಕೋರಿದ್ದಾನೆ. ಈ ಅಪರಿಚಿತನನ್ನು ಅಂಜುಂ ಪರ್ವೇಜ್ ಎಂದೇ ನಂಬಿರುವ ವ್ಯಾಸರಾಜ್ ತನ್ನ ವಾಟ್ಸ್‌ಆ್ಯಪ್ ನಂಬರ್ ಅನ್ನು ನೀಡಿದ್ದಾರೆ.

ವಾಟ್ಸ್‌ಆ್ಯಪ್‌ ಸಂಖ್ಯೆ ಸಿಕ್ಕ ಬಳಿಕ ಅಪರಿಚಿತ ಆ ಸಂಖ್ಯೆಗೆ ಲಿಂಕ್ ಕಳುಹಿಸಿ 3 ಲಕ್ಷ ರೂ. ಮೌಲ್ಯದ ಅಮೇಜಾನ್ ಗಿಫ್ಟ್​ ವೋಚರ್ ಖರೀದಿಸುವಂತೆ ಸೂಚಿಸಿದ್ದಾನೆ. ಇದನ್ನು ನಂಬಿದ ವ್ಯಾಸರಾಜ್, ತಕ್ಷಣ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ. ಹಾಗೂ ಬಿಎಂಆರ್‌ಸಿಎಲ್ ಉಪ ಪ್ರಧಾನ ವ್ಯವಸ್ಥಾಪಕ(ಹಣಕಾಸು) ವೀರಭದ್ರ ಹಾದಿಮನಿಯವರಿಂದ 1 ಲಕ್ಷ ರೂ. ಪಡೆದು ಒಟ್ಟಾರೆ 3 ಲಕ್ಷ ರೂ. ಮೌಲ್ಯದ ಅಮೆಜಾನ್ ಗಿಫ್ಟ್​ ವೋಚರ್‌ ಖರೀದಿಸಿದ್ದಾರೆ. ಆ ಬಳಿಕ ಇಂಡಿಯನ್ ಕೋವಿಡ್ ಫಂಡ್​ ರೈಸಿಂಗ್ ಎಂಬ ವಿಳಾಸಕ್ಕೆ ಕಳುಹಿಸಿದ್ದಾರೆ. ಇದಾದ ಬಳಿಕ ಅಂಜುಂ ಪರ್ವೇಜ್ ಅವರ ಗಮನಕ್ಕೆ ತಂದಾಗ ಅಂತಹ ಯಾವುದೇ ಕೋರಿಕೆ ಮಾಡಿಲ್ಲ ಎಂಬುದು ಗೊತ್ತಾಗಿದೆ. ಕೊನೆಗೆ ತಾನಜ ಸೈಬರ್ ವಂಚನೆಗೆ ಒಳಗಾಗಿರುವುದು ಅವರಿಗೆ ತಿಳಿದು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.