ಅಮೇರಿಕಾದಲ್ಲಿ ನಡೆದ ದರೋಡೆ ಕೃತ್ಯದಲ್ಲಿ ಆಂಧ್ರಪ್ರದೇಶ ಮೂಲದ ಯುವಕ ಹತ್ಯೆ

ಅಮರಾವತಿ(ಆಂಧ್ರಪ್ರದೇಶ) : ಅಮೇರಿಕಾದ ಅಲಬಾಮಾದಲ್ಲಿ ನಡೆದಿರುವ ದರೋಡೆ ಕೃತ್ಯವೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಯುವಕನನ್ನು ಹತ್ಯೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶ ರಾಜ್ಯದ ಸತ್ಯ ಕೃಷ್ಣ ಚಿತ್ತೂರಿ(27) ಹತ್ಯೆಯಾದ ಯುವಕ. ಸತ್ಯ ಕೃಷ್ಣ ಅಮೇರಿಕಾದ ಅಲಬಾಮಾದ ಕ್ರೌನ್​ ಸರ್ವೀಸ್​ ಸ್ಟೇಶನ್​ನಲ್ಲಿ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದರು. ಇವರು ಕೆಲಸ ಮಾಡುತ್ತಿದ್ದ ಸ್ಟೋರ್​ನಲ್ಲಿ ಫೆಬ್ರವರಿ 10ರಂದು ದರೋಡೆ ಕೃತ್ಯವೊಂದು ನಡೆದಿತ್ತು. ಈ ವೇಳೆ ದುಷ್ಕರ್ಮಿಗಳು ಸತ್ಯ ಕೃಷ್ಣನನ್ನು ಕೊಲೆ ಮಾಡಿದ್ದಾರೆ. ಕೊಲೆ ಆರೋಪಿಯು ಮಾಸ್ಕ್​ ಧರಿಸಿದ್ದು, ಸ್ವೆಟ್​ಶರ್ಟ್​ ಧರಿಸಿದ್ದ ಫೋಟೋವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಅಲ್ಲದೇ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ದುರಂತವೆಂದರೆ, ಸತ್ಯ ಕೃಷ್ಣ ಕುಟುಂಬ ತಿಂಗಳ ಹಿಂದೆಯಷ್ಟೇ ಅಮೆರಿಕಾಕ್ಕೆ ಬಂದಿತ್ತು. ಅಲ್ಲದೇ, ಅವರ ಪತ್ನಿ ಗರ್ಭಿಣಿಯಾಗಿದ್ದು, ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇದೀಗ ಸತ್ಯ ಕೃಷ್ಣ ಅವರ ಅನಿರೀಕ್ಷಿತ ನಿರ್ಗಮನ ಕುಟುಂಬಸ್ಥರನ್ನು ಕಂಗೆಡಿಸಿದೆ. ಇತ್ತ ಆಂಧ್ರಪ್ರದೇಶದದಲ್ಲಿ ಸತ್ಯ ಕೃಷ್ಣರ ಅಂತ್ಯಸಂಸ್ಕಾರಕ್ಕೆ 'ಗೋ ಫಂಡ್​ ಮೀ' ಹೆಸರಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಸಿ, ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಗುತ್ತಿದೆ.