
ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ: ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ ಬಯಲು, ಸಹೋದರನಿಂದಲೇ ಕೊಲೆ
2/01/2022 11:30:00 PM
ಕಲಬುರಗಿ: ನಗರದಲ್ಲಿ ಫೋಟೊಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸರು ಐವರು ಹಂತಕರನ್ನು ಬಂಧಿಸಿದ್ದಾರೆ.
ಮಹಾಂತೇಶ್ ಆಳಂದಕರ್, ಬಸವರಾಜ್ ಸಲಗಾರ್, ಫಕರಿಪ್ಪ ಸಲಗಾರ್, ಸಿದ್ದಾರೂಢ ಕೋರಬಾರ್ ಹಾಗೂ ಅಶೋಕ ಜಮಾದಾರ್ ಬಂಧಿತ ಆರೋಪಿಗಳು.
ಕೊಲೆಯಾದ ಶಿವಕುಮಾರ್ ಪ್ರಮುಖ ಆರೋಪಿ ಮಹಾಂತೇಶ್ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಮಹಾಂತೇಶ್ಗೆ ಶಿವಕುಮಾರ್ ದೊಡ್ಡಪ್ಪನ ಮಗನಾಗಿದ್ದು, ವರಸೆಯಲ್ಲಿ ಇಬ್ಬರಿಬ್ಬರೂ ಸಹೋದರರಾಗಿದ್ದರು. ಆದರೆ ಶಿವಕುಮಾರ್ ತನ್ನ ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನ್ನು ಮಹಾಂತೇಶ್ ಕಣ್ಣಾರೆ ಕಂಡಿದ್ದ ಎನ್ನಲಾಗಿದೆ.
ವರಸೆಯಲ್ಲಿ ತಾಯಿಯಾಗುವವಳೊಂದಿಗೆ ಶಿವಕುಮಾರ್ ಅಕ್ರಮ ಸಂಬಂಧ ಹೊಂದಿದ್ದ. ಆದ್ದರಿಂದ ಆಕೆಯ ಮಗ ಮಹಾಂತೇಶ್ ದೊಡ್ಡಪ್ಪನ ಮಗನ ಶಿವಕುಮಾರ್ ಮೇಲೆ ಸೇಡು ತಿರಿಸಿಕೊಳ್ಳಲು ಮಾವ ಬಸವರಾಜ್ ನೊಂದಿಗೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದ.
ಜನವರಿ 25 ರಂದು ಆಳಂದ ತಾಲೂಕಿನ ಶ್ರೀಚಂದ ಗ್ರಾಮದಿಂದ ಶಿವಕುಮಾರ್ನನ್ನು ಬೈಕ್ ನಲ್ಲಿ ಕರೆದುಕೊಂಡು ಬಂದಿದ್ದ ಮಹಾಂತೇಶ್, ಹತ್ಯೆ ಮಾಡಿ ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿಯ ಮೇಲೆ ಬಿಸಾಕಿ ಎಸ್ಕೇಪ್ ಆಗಿದ್ದರು. ಶಿವಕುಮಾರ್ ರುಂಡ ಮುಂಡ ಬೇರೆ ಮಾಡಿ ಭೀಕರವಾಗಿ ಹತ್ಯೆಗೈದು ರೈಲ್ವೆ ಹಳಿಯ ಮೇಲೆ ಎಸೆದಿದ್ದರು. ಆ ಬಳಿಕ ಕೃತ್ಯವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹಂತಕರು ಮುಂದಾಗಿದ್ದರು.
ಆದರೆ, ಈ ಬಗ್ಗೆ ಅನುಮಾನಗೊಂಡು ತನಿಖೆ ನಡೆಸಿರುವ ರೈಲ್ವೆ ಪೊಲೀಸರಿಗೆ ಘಟನೆಯ ಅಸಲಿಯತ್ತು ತಿಳಿದುಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.