ಕಾನ್ಪುರ: "ಅಪ್ಪಾ, ಕೊನೆಗೂ ನೀವು ಗೆದ್ದಿರಿ, ನಾನು ಸೋತುಹೋಗಿದ್ದೇನೆ" ಎಂದು ಡೆತ್‌ನೋಟ್ ಬರೆದಿಟ್ಟು ಯುವ ನ್ಯಾಯವಾದಿ ಕಾನ್ಪುರ ನ್ಯಾಯಾಲಯದ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಶರಣಾಗಿದ್ದಾರೆ.
ತಂದೆಯ ನಿರಂತರ ಮಾನಸಿಕ ಕಿರುಕುಳ ಹಾಗೂ ಅತಿಯಾದ ಕಟ್ಟುನಿಟ್ಟುಗಳಿಂದ ಬೇಸತ್ತ ಪ್ರಿಯಾಂಶು ಶ್ರೀವಾಸ್ತವ್ ಎಂಬ 23ವರ್ಷದ ಯುವ ನ್ಯಾಯವಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಬರೆದಿಟ್ಟಿರುವ ಸುದೀರ್ಘ ಡೆತ್‌ನೋಟ್ ಹಾಗೂ ವಾಟ್ಸ್‌ಆ್ಯಪ್ ಸ್ಟೇಟಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತ್ಮಹತ್ಯೆಗೂ ಮುನ್ನ ಅವರು ಐದನೇ ಮಹಡಿಯಲ್ಲಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಮಾತು ಮುಗಿಯುತ್ತಿದ್ದಂತೆಯೇ ಅಲ್ಲಿಂದ ಏಕಾಏಕಿ ಕೆಳಕ್ಕೆ ಹಾರಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಅವರು ಬರೆದಿಟ್ಟ ಡೆತ್‌ನೋಟ್ ಪೊಲೀಸ್ ಕೈಗೆ ಸಿಕ್ಕಿದೆ. ಅದರಲ್ಲಿ ತಂದೆಯ ನಿರಂತರ ಮಾನಸಿಕ ಕಿರುಕುಳ ಹಾಗೂ ಅತಿಯಾದ ಕಟ್ಟುನಿಟ್ಟುಗಳಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.
ನಾನು ಯಾರನ್ನೂ ಕೇಳದೆ ಒಮ್ಮೆ ಫ್ರಿಡ್ಜ್‌ನಿಂದ ಮಾವಿನ ಜ್ಯೂಸ್ ತೆಗೆದುಕೊಂಡೆ. ಆಗ ನನಗೆ ಕೇವಲ ಆರು ವರ್ಷ. ಇದಕ್ಕಾಗಿ ನನ್ನನ್ನು ಬಟ್ಟೆ ಬಿಚ್ಚಿಸಿ ಮನೆಯಿಂದ ಹೊರಗೆ ಕಳುಹಿಸಲಾಯಿತು. ಪೋಷಕರು ತಮ್ಮ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿರಬೇಕು, ಆದರೆ ಅದು ಉಸಿರುಗಟ್ಟಿಸುವ ಹಂತಕ್ಕೆ ಹೋಗಬಾರದು ಎಂದು ಬರೆದಿದ್ದಾರೆ. "ನಾನು ನನ್ನ ಜೀವನದಲ್ಲಿ ಅದೆಲ್ಲವನ್ನು ಮರೆತು ಮುಂದುವರೆಯಲು, ಸಂತೋಷವಾಗಿ ಬದುಕಲು ಬಹಳಷ್ಟು ಪ್ರಯತ್ನಿಸಿದೆ. ಆದರೆ ಅದು ಸಾಧ್ಯಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಬರೆದಿದ್ದಾರೆ.
ಸಣ್ಣ ಸಣ್ಣ ವಿಚಾರಗಳಿಗೂ ಅವರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ಇದು ತನ್ನ ಮೇಲೆ ಒತ್ತಡ ಹೇರುತ್ತಿತ್ತು. ಈ ಒತ್ತಡದೊಂದಿಗೆ ನಾನು ಇನ್ನು ಮುಂದೆ ಬದುಕಲು ಸಾಧ್ಯವಿಲ್ಲ ಎಂದು ಭಾವಿಸಿ ಕೊನೆಯದಾಗಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಅಲ್ಲದೆ ತಾನು ಫಿಸಿಕಲ್ ಶಿಕ್ಷಣ ಪಡೆಯುವುದಕ್ಕೆ ಬಯಸಿದ್ದರೂ ತನ್ನ ತಂದೆ ಕಂಪ್ಯೂಟರ್ ಸೈನ್ಸ್ ಕಲಿಯುವುದಕ್ಕೆ ಒತ್ತಾಯಿಸುತ್ತಿದ್ದರು. ತನ್ನನ್ನು ತಂದೆ ಸಾರ್ವಜನಿಕವಾಗಿ ಅವಮಾನಿಸುತ್ತಿದ್ದರು. ತನ್ನ ಜೀವನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ನಾನು ಎಲ್ಲಿಗೆ ಹೋಗುತ್ತಿದ್ದೇನೆ, ನಾನು ಯಾವಾಗ ವಾಪಸ್ ಬರುತ್ತೇನೆ, ಫೋನ್‌ನಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಅವರು ಯಾವಾಗಲೂ ನನ್ನನ್ನು ಕೇಳುತ್ತಾರೆ. ನನ್ನ ಜೀವನದಲ್ಲಿ ಅನಗತ್ಯ ಹಸ್ತಕ್ಷೇಪ ಉಸಿರುಗಟ್ಟಿಸುತ್ತಿದೆ. ಪ್ರತಿದಿನ ಉಸಿರುಗಟ್ಟಿಸುವುದಕ್ಕಿಂತ ಒಮ್ಮೆಲೇ ಶಾಶ್ವತವಾಗಿ ಸಾಯುವುದು ಉತ್ತಮ" ಎಂದು ಅವರು ಬರೆದಿದ್ದಾರೆ
ನಾನು ಎಲ್ಲಾ ಪೋಷಕರಲ್ಲಿ ಮನವಿ ಮಾಡುತ್ತಿದ್ದೇನೆ. ನೀವು ನಿಮ್ಮ ಮಕ್ಕಳಿಗೆ ಅವರಿಗೆ ತಡೆಯುವುದಕ್ಕೆ ಅಸಾಧ್ಯವಾಗದಷ್ಟು ಹಿಂಸಿಸಬೇಡಿ. ನನ್ನ ತಂದೆಗೆ ನನ್ನ ಮೃತದೇಹವನ್ನು ಮುಟ್ಟಲು ಬಿಡಬೇಡಿ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಬೇಡ, ಇದರಿಂದ ನನ್ನ ಕುಟುಂಬ ಕಷ್ಟ ಎದುರಿಸುವುದನ್ನು ನಾನು ಬಯಸುವುದಿಲ್ಲ. ಇಂತಹ ತಂದೆ ಯಾರಿಗೂ ಸಿಗದಿರಲಿ ಎಂದು ನಾನು ಬಯಸುತ್ತೇನೆ. ನಾನು ಸೋತಿದ್ದೇನೆ, ಅಪ್ಪ ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು" ಎಂದು ಅವರು ಬರೆಯುವ ಮೂಲಕ ತಂದೆಯ ಮೇಲಿದ್ದ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.