ಅಡೂರು: ವಿವಾಹವಾಗಿ ವಧುವಿನ ಮನೆಯಲ್ಲಿ ಮೊದಲ ರಾತ್ರಿಯನ್ನು ಮುಗಿಸಿ ಚಿನ್ನಾಭರಣ ಹಾಗೂ ಹಣ ಕದ್ದು ಪರಾರಿಯಾಗಿದ್ದ ವರನನ್ನು ಕೇರಳದ ಅಡೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 30 ಸವರನ್ ಚಿನ್ನ ಮತ್ತು 2.75 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕೇರಳದ ಕಾಯಂಕುಲಂ ನಿವಾಸಿ ಅಝರುದ್ದೀನ್ ರಶೀದ್ (30) ಎಂಬಾತ ಬಂಧಿತ ಆರೋಪಿ.
ಅಝರುದ್ದೀನ್ ಪಹಕುಲಂ ನಿವಾಸಿ ಯುವತಿಯನ್ನು ಜ.30ರಂದು ಎಸ್.ಎಚ್. ಆಡಿಟೋರಿಯಂನಲ್ಲಿ ವಿವಾಹವಾಗಿದ್ದ. ಅದೇ ದಿನ ಸಂಪ್ರದಾಯದಂತೆ ವಧುವಿನ ಮನೆಯಲ್ಲಿ ಮೊದಲ ರಾತ್ರಿ ನಡೆದಿತ್ತು. ಆದರೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಸ್ನೇಹಿತನಿಗೆ ಅಪಘಾತವಾಗಿದೆ ಎಂದು ಅಝರುದ್ದೀನ್ ಮನೆ ಬಿಟ್ಟಿದ್ದಾನೆ.
ಆ ಬಳಿಕ ಆತನಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿದೆ ಎಂದು ಬರುತ್ತಿತ್ತು. ಅಲ್ಲದೆ ವಧುವಿನ ಮನೆಯಲ್ಲಿ 30 ಸವರನ್ ಚಿನ್ನ ಮತ್ತು 2.75 ಲಕ್ಷ ರೂ. ಹಣ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಇದರಿಂದ ಅನುಮಾನಗೊಂಡ ವಧುವಿನ ಮನೆಯವರು ತಕ್ಷಣ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಡೂರು ಪೊಲೀಸರಿಗೆ ಆರೋಪಿ ಅಝರುದ್ದೀನ್ ಬಗ್ಗೆ ಸ್ಫೋಟಕ ಮಾಹಿತಿಯೊಂದು ತಿಳಿಯುತ್ತದೆ.
ಈತ ಎರಡು ವರ್ಷಗಳ ಹಿಂದೆ ಅಲಪ್ಪುಳದ ಚೆಪ್ಪಾಡ್ ಎಂಬಲ್ಲಿನ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಇದೀಗ ಆತ ಮೊದಲ ಪತ್ನಿಯೊಂದಿಗೆ ಇದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ತಿಳಿಯುತ್ತದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದು, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.