ಆಫೀಸ್ ಕಾರ್ಯ ನಿಮಿತ್ತ ಹೊರ ಹೋಗುತ್ತಿದ್ದಾಗಲೂ ಅರಳುತ್ತಿದ್ದ ಪತಿಯ ಮುಖ ನೋಡಿ ಪತ್ನಿಗೆ ಅನುಮಾನ: ಪತಿಯ ಮೇಲೆ ಇದೀಗ ಪ್ರಕರಣ ದಾಖಲು

ಪುಣೆ: ಕಚೇರಿ ಕಾರ್ಯದ ನಿಮಿತ್ತ ಪದೇ ಪದೇ ಬೇರೆ ಊರಿಗೆ ಹೋಗುತ್ತಿರುವ ಪತಿಯನ್ನು ಕಂಡು ಪತ್ನಿ ಆತ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ ಎಂದೇ ಅಂದುಕೊಂಡಿದ್ದಳು. ಆದರೆ ಯಾವಾಗ ಬೇರೆ ಊರಿಗೆ ಹೋಗುವಾಗಲೂ ಪತಿಯ ಮುಖದಲ್ಲಿ ಸ್ವಲ್ಪವೂ ಬೇಸರವಿರುತ್ತಿರಲಿಲ್ಲ. ಸಾಲದು ಎಂಬುದಕ್ಕೆ ಟೂರ್‌ ಮುಗಿಸಿ ಬಂದಾಗಲೂ ಅದೇನೋ ಸಂತಸದಲ್ಲಿರುತ್ತಿದ್ದ. ಮೊದಮೊದಲು ಇದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದ ಪತ್ನಿ ಆಫೀಸ್‌ ಕೆಲಸವೆಂದಾಗಲೆಲ್ಲಾ ಸದಾ ಖುಷಿಯಲ್ಲಿಯೇ ಇರುತ್ತಿದ್ದ ಪತಿಯ ಬಗ್ಗೆ ಅನುಮಾನ ಪಡಲು ಆರಂಭಿಸಿದ್ದಾಳೆ. ಆ ಬಳಿಕ ಪತಿಯ ಗುಟ್ಟು ರಟ್ಟಾಯ್ತು. ಇದೀಗ ಆ ಪತಿಯ ಮೇಲೆ ಪ್ರಕರಣ ದಾಖಲಾಗಿದೆ.

ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯಲ್ಲಿ. ಗುಜರಾತ್ ಮೂಲದ ಉದ್ಯಮಿ ಹಾಗೂ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಪತ್ನಿಯ ಮೇಲೆಯೇ ಸಂದೇಹಪಟ್ಟಾಕೆ. ಈಕೆಗೆ ಪತಿಯ ಬಗ್ಗೆ ಸಂದೇಹ ಶುರುವಾಗುತ್ತಲೇ ಆತನ ಅರಿವಿಗೆ ಬಾರದಂತೆ ಕಾರಿಗೆ ಜಿಪಿಎಸ್ ಅಳವಡಿಸಿದ್ದಾಳೆ. ಆ ಬಳಿಕವೇ ಪತ್ನಿಗೆ ಸುಳ್ಳು ಹೇಳಿ ಆತ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವುದು ತಿಳಿದು ಬಂದಿದೆ. 

ಕಳೆದ ವಾರ ಪತಿ ಬೆಂಗಳೂರಿಗೆ ಹೋಗುತ್ತೇನೆ ಎಂದಿದ್ದ. ಪತ್ನಿ ಮಾಮೂಲಿನಂತೆ ಆತನ ಜಿಪಿಎಸ್‌ ಅಳವಡಿಸಿದ್ದಳು. ಅದರೆ ಪತಿ ಹೋಗಿದ್ದ ಪುಣೆಗೆ. ತಾನು ಏನು ಮಾಡಬೇಕೆಂದು ಅರಿತಿದ್ದ ಪತ್ನಿ ತಕ್ಷಣ ಪತಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸರು ಹೋಟೆಲ್‌ ಮೇಲೆ ದಾಳಿ ನಡೆಸಿದ್ದಾರೆ. 

ಹೊಟೇಲ್ ಕೌಂಟರ್‌ನಲ್ಲಿ ವಿಚಾರಿಸಿದಾಗ ವಿಳಾಸಕ್ಕೆಂದು ಕೊಟ್ಟಿದ್ದ ಆಧಾರ್ ಕಾರ್ಡ್‌ ನೋಡಿದಾಗ ಪೊಲೀಸರು ಶಾಕ್‌ ಆಗಿದ್ದಾರೆ. ಏಕೆಂದರೆ ತನ್ನ ಆಧಾರ್‌ ಕಾರ್ಡ್‌ ನೊಂದಿಗೆ ತನ್ನ ಜತೆಗಿರುವ ಯುವತಿಯ ಪರಿಚಯ ಹೇಳುವ ಆಧಾರ್‌ ಕಾರ್ಡ್‌ ಕೂಡ ಕೊಟ್ಟಿದ್ದ. ಆದರೆ ಅಸಲಿಗೆ ಅದು ಆ ಯುವತಿಯ ಆಧಾರ್ ಕಾರ್ಡ್‌ ಆಗಿರದೆ ಆತನ ಪತ್ನಿಯ ಆಧಾರ್‌ ಕಾರ್ಡ್ ಆಗಿತ್ತು. ಅಲ್ಲದೆ ತನ್ನೊಂದಿಗೆ ಬಂದವಳು ಪತ್ನಿ ಎಂದು ಸುಳ್ಳು ಹೇಳಿದ್ದ. ಬಳಿಕ ತನಿಖೆ ಮಾಡಿದಾಗ ಎಲ್ಲಾ ಹೋಟೆಲ್‌ಗಳಲ್ಲಿಯೂ ಈತ ಇದೇ ರೀತಿ ಮಾಡುತ್ತಿರುವುದು ಕಂಡು ಬಂದಿದೆ. ಸದ್ಯ ಪತಿ ಹಾಗೂ ಆ ಲವರ್‌ ವಿರುದ್ಧ ಕೇಸ್‌ ದಾಖಲಾಗಿದೆ. ಸಿಸಿಟಿವಿ ಫುಟೇಜ್ ಸೇರಿದಂತೆ ಕೆಲವು ಸಾಕ್ಷ್ಯಾಧಾರಗಳನ್ನು ಪೊಲೀಸರು ಸಂಗ್ರಹಿಸಿದ್ದು, ಪತ್ನಿಯ ಆಧಾರ್‌ ಕಾರ್ಡ್‌ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.