ಕೋಟಾ: ಇನ್ನೇನು ಕೆಲವೇ ಕ್ಷಣಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಮದುಮಗನೋರ್ವನು ತನ್ನ 8ಮಂದಿ ಕುಟುಂಬಿಕರೊಂದಿಗೆ ಕಾರು ಅಪಘಾತದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ರಾಜಸ್ತಾನದ ಕೋಟದಲ್ಲಿ ನಡೆದಿದೆ
ಮದುವೆ ಮನೆ ವಿವಾಹ ಸಂಭ್ರಮದಲ್ಲಿ ತೇಲಾಡುತ್ತಿತ್ತು. ಆದರೆ ವಿಧಿಯಾಟವೇ ಬೇರೆಯಿತ್ತು. ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದ ಚಾಲಕನಿಂದಾಗಿ ಮದುಮಗನೂ ಸೇರಿ 9 ಮಂದಿ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಛೋಟಿ ಪುಲಿಯಾದಿಂದ ಚಂಬಲ್ ನದಿಗೆ ಕಾರು ಬಿದ್ದು ಮದುಮಗ ಸೇರಿ 9 ಮಂದಿ ಮೃತಪಟ್ಟಿದ್ದಾರೆ.
ಇವರೆಲ್ಲರೂ ಬೆಳ್ಳಂಬೆಳಗ್ಗೆ 5.30ಕ್ಕೆ ಸವಾಯಿ ಮಾಧೋಪುರದಿಂದ ಹೊರಟು ಉಜ್ಜಯಿನಿಗೆ (ಮಧ್ಯಪ್ರದೇಶ) ಹೋಗುತ್ತಿದ್ದರು. ಇದೇ ವೇಳೆ ಕಾರು ನಿಯಂತ್ರಣ ತಪ್ಪಿ ಚಂಬಲ್ ನದಿಗೆ ಬಿದ್ದಿದೆ. ಕಾರಿನಲ್ಲಿದ್ದವರು ಗಾಜನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ ಎಲ್ಲಾ ಗ್ಲಾಸ್ ತೆರೆದುಕೊಳ್ಳಲಿಲ್ಲ. ಒಂದು ಗ್ಲಾಸ್ ಮಾತ್ರ ತೆರೆಯಲು ಸಾಧ್ಯವಾಗಿದೆ. ಆದರೆ ಅಷ್ಟರಲ್ಲಾಗಲೇ ಕಾರಿನಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ. ಉಳಿದ ಇಬ್ಬರ ದೇಹಗಳು ನದಿಯಲ್ಲಿ ತೇಲಿ ಹೋಗಿವೆ.
ಸ್ಥಳೀಯರು ಕಾರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕವೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಡೈವಿಂಗ್ ತಂಡ ಇದುವರೆಗೆ 9 ಮೃತದೇಹಗಳನ್ನು ಹೊರತೆಗೆದಿದೆ. ಕಾರಿನಲ್ಲಿ ಇನ್ನೂ ಜನರಿದ್ದರೇ ಎಂಬುದರ ಬಗ್ಗೆ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. ಕ್ರೇನ್ ಸಹಾಯದಿಂದ ಕಾರನ್ನು ನದಿಯಿಂದ ಮೇಲೆಕ್ಕೆತ್ತಲಾಗಿದೆ. ಚಾಲಕ ಕುಡಿದು ಕಾರು ಚಾಲನೆ ಮಾಡಿರುವುದು ಮೇಲ್ನೊಟಕ್ಕೆ ಕಂಡುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.